ಡಿಂಪಲ್ ಕ್ವೀನ್ ರಚಿತಾ ರಾಮ್ ಸಹೋದರಿ ನಿತ್ಯಾ ರಾಮ್ ಅವರ ಕಲ್ಯಾಣೋತ್ಸವ ಇಂದು ಅದ್ದೂರಿಯಾಗಿ ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್ನಲ್ಲಿ ಜರುಗಿತು.
ನಿತ್ಯಾ ರಾಮ್ ಮತ್ತು ಗೌತಮ್ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಚಿನ್ನದ ಬಣ್ಣದ ರೇಷ್ಮೆ ಸೀರೆಯಲ್ಲಿ ಗೊಂಬೆಯಂತೆ ಮಿಂಚುತ್ತಿದ್ದರು. ನಿನ್ನೆ ನಿತ್ಯಾ ರಾಮ್ ಮನೆಯಲ್ಲಿ ಮೆಹಂದಿ, ಅರಿಶಿನ ಶಾಸ್ತ್ರ ಮತ್ತು ಸಂಗೀತ ಕಾರ್ಯಕ್ರಮಗಳು ನಡೆದಿತ್ತು. ಗೌತಮ್ ಆಸ್ಟ್ರೇಲಿಯಾದಲ್ಲಿ ಬ್ಯುಸಿನೆಸ್‌ಮ್ಯಾನ್ ಆಗಿದ್ದು, ಮದುವೆಯ ನಂತರ ನಿತ್ಯಾ ಹಾಗೂ ಗೌತಮ್ ಆಸ್ಟ್ರೇಲಿಯಾದಲ್ಲಿಯೇ ನೆಲಸಲಿದ್ದಾರೆ ಎನ್ನಲಾಗಿದೆ.
ನಿತ್ಯಾ ರಾಮ್-ಗೌತಮ್ ಪರಿಚಯವಾದದ್ದು ಎಲ್ಲಿ?
ನಿತ್ಯ ರಾಮ್ ತಾಯಿ ಮತ್ತು ಗೌತಮ್ ತಾಯಿ ಇಬ್ಬರೂ ಸ್ನೇಹಿತರು. ತಮ್ಮ ತಾಯಂದಿರ ಮೂಲಕ ನಿತ್ಯಾ ಹಾಗೂ ಗೌತಮ್ ಪರಿಚಯವಾಗಿದೆ. ಬಳಿಕ ಒಳ್ಳೆಯ ಸ್ನೇಹಿತರಾಗಿದ್ದ ಇಬ್ಬರೂ, ಎರಡೂ ಮನೆಯವರ ಸಮ್ಮತಿಯ ಮೇರೆಗೆ ಹಸೆಮಣೆ ಏರಿದ್ದಾರೆ.
ಗೌತಮ್ ಅವರಿಗೆ ತಮ್ಮ ಪತ್ನಿ ಓರ್ವ ನಟಿಯೆಂದು ಗೊತ್ತೇ ಇರಲಿಲ್ಲವಂತೆ. ನಿತ್ಯಾ ಸಹೋದರಿ ರಚಿತಾ ರಾಮ್ ಕೂಡ ನಟಿ ಎನ್ನುವ ಸಂಗತಿ ಗೌತಮ್ಗೆ ತಿಳಿದಿರಲಿಲ್ಲವಂತೆ. ನಟನೆಯ ವಿಚಾರ ತಿಳಿದು, ನಂದಿನಿ ಧಾರಾವಾಹಿಯ ಕ್ಲಿಪ್ಪಿಂಗ್ ನೋಡಿದ ಗೌತಮ್, ಪತ್ನಿಯ ನಟನೆಗೆ ಫಿದಾ ಆಗಿದ್ದಾರಂತೆ.
ಕುಟುಂಬಸ್ಥರು, ಕಿರುತೆರೆ ಕಲಾವಿದರು, ಚಂದನವನದ ನಟ-ನಟಿಯರು ಮದುವೆ ಸಮಾರಂಭಕ್ಕೆ ಆಗಮಿಸಿ, ನವ ದಂಪತಿಯನ್ನು ಹರಸಿದರು.