ಬೆಂಗಳೂರು: ನಿಷೇಧಿತ ಐಸಿಸ್ ಸಂಘಟನೆಯೊಂದಿಗೆ ಗುರುತಿಸಿಕೊಂಡು ದೇಶದಲ್ಲಿ ವಿದ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿರುವ ಮಾಹಿತಿ ಆಧರಿಸಿ ಕರ್ನಾಟಕ ಸೇರಿ ನಾಲ್ಕು ರಾಜ್ಯಗಳಲ್ಲಿ ಇಂದು ದಾಳಿ ಮಾಡಿದ ಎನ್ಐಎ ಅಧಿಕಾರಿಗಳು ರಾಜ್ಯದ ಐವರು ಸೇರಿ ಒಟ್ಟು ಎಂಟು ಶಂಕಿತ ಆರೋಪಿಗಳನ್ನು ಬಂಧಿಸಿದ್ದಾರೆ. ಜೊತೆಗೆ ಅವರಿಂದ ಸುಧಾರಿತ ಸ್ಫೋಟಕ ವಸ್ತುಗಳು (ಐಇಡಿ), ಉಗ್ರ ಸಂಚಿಗೆ ಸಂಬಂಧಿಸಿದ ಮಹತ್ವದ ದಾಖಲಾತಿ, ಹರಿತವಾದ ಆಯುಧ ಹಾಗೂ ಲಕ್ಷಾಂತರ ರೂಪಾಯಿ ನಗದನ್ನು ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ದೇಶದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿರುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿದ ಎನ್ಐಎ ತಂಡ ಕರ್ನಾಟಕದ ಬಳ್ಳಾರಿ, ಬೆಂಗಳೂರು, ಮಹಾರಾಷ್ಟ್ರ, ಜಾರ್ಖಂಡ್ ಹಾಗೂ ದೆಹಲಿಯ ವಿವಿಧ 19 ಕಡೆಗಳಲ್ಲಿ ದಾಳಿ ನಡೆಸಿ, ಒಟ್ಟು ಎಂಟು ಮಂದಿ ಶಂಕಿತ ಆರೋಪಿಗಳನ್ನು ಬಂಧಿಸಿ ತನ್ನ ಸುಪರ್ದಿಗೆ ತೆಗೆದುಕೊಂಡಿದೆ ಎಂದು ವರದಿಯಾಗಿದೆ. ಪ್ರಕರಣದ ಪ್ರಮುಖ ರೂವಾರಿ ಬಳ್ಳಾರಿಯ ಮೀನಾಜ್ ಸುಲೇಮಾನ್ ಮತ್ತು ಸೆಯ್ಯದ್ ಸಮೀರ್ ಹಾಗೂ ಬೆಂಗಳೂರಿನಲ್ಲಿ ಮೊಹಮ್ಮದ್ ಮುನಿರುದ್ದೀನ್, ಸೈಯ್ಯದ್ ಸಮೀವುಲ್ಲಾ ಹಾಗೂ ಮೊಹಮ್ಮದ್ ಮುಜಾಮಿಲ್ ಎಂಬುವರನ್ನು ಬಂಧಿಸಲಾಗಿದೆ. ಇನ್ನುಳಿದ ಮೂವರನ್ನು ಮುಂಬೈ, ದೆಹಲಿ ಹಾಗೂ ಜೆಮ್ಶೆಡ್ಪುರದಲ್ಲಿ ಬಂಧಿತರಾಗಿದ್ದಾರೆ.
ದಾಳಿ ವೇಳೆ ಸ್ಫೋಟಕ್ಕೆ ಬಳಸಲಾಗುವ ಸಲ್ಫರ್, ಪೊಟ್ಯಾಶಿಯಂ ನೈಟ್ರೇಟ್, ಇದ್ದಿಲು, ಗನ್ ಪೌಡರ್, ಸಕ್ಕರೆ, ಎಥೆನಾಲ್, ಹರಿತವಾದ ಆಯುಧಗಳು, ಲಕ್ಷಾಂತರ ರೂಪಾಯಿ ಹಣ, ಉಗ್ರ ಸಂಚಿಗೆ ಸಂಬಂಧಿಸಿ ಮಹತ್ವದ ದಾಖಲಾತಿಗಳು, ಮೊಬೈಲ್ಗಳು ಹಾಗೂ ಡಿಜಿಟಲ್ ಉಪಕರಣಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಉಗ್ರ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿದ್ದ ಎಂಟು ಮಂದಿ ಶಂಕಿತರು ದೇಶದ ತುಂಬೆಲ್ಲ ಜಿಹಾದಿ ಮೂಲಭೂತವಾದವನ್ನು ಹರಡಲು ಹಾಗೂ ಇದಕ್ಕಾಗಿ ವಿಧ್ವಂಸಕ ಕೃತ್ಯವೆಸಗಲು ಸನ್ನದ್ಧರಾಗಿದ್ದರು. ಸ್ಫೋಟಕ್ಕೆ ಬೇಕಾದ ಕಚ್ಚಾ ವಸ್ತುಗಳನ್ನು ವಿವಿಧ ಮೂಲಗಳಿಂದ ಸಂಗ್ರಹಿಸಿದ್ದರು ಎಂದು ದಾಳಿ ವೇಳೆ ತಿಳಿದು ಬಂದಿದೆ ಎನ್ನಲಾಗಿದೆ. ಹಿಂಸಾತ್ಮಕ ಕೃತ್ಯಕ್ಕಾಗಿ ಕಾಲೇಜು ಯುವಕರನ್ನು ಸೆಳೆದು ಸಂಘಟನೆಯಲ್ಲಿ ನೇಮಕಾತಿಗೂ ಮುಂದಾಗಿದ್ದರು. ದೊಡ್ಡಮಟ್ಟದಲ್ಲಿ ಹಿಂಸೆ ಕೃತ್ಯವೆಸಗಲು ತಯಾರಿ ನಡೆಸಿಕೊಂಡಿದ್ದರು. ಐಸಿಸ್ ಮಾಡ್ಯೂಲ್ ರೀತಿ ಬಳ್ಳಾರಿ ಮಾಡ್ಯೂಲ್ ಎಂಬಂತೆ ಬಿಂಬಿಸಿಕೊಂಡಿದ್ದರು ಎಂಬ ವಿಚಾರವೂ ದಾಳಿ ವೇಳೆ ಎನ್ಐಎಗೆ ಲಭ್ಯವಾಗಿದೆ ಎನ್ನಲಾಗಿದೆ. ಇದಕ್ಕೆ ಬಳ್ಳಾರಿಯ ವ್ಯಕ್ತಿ ನಾಯಕನಾಗಿ ಗುರುತಿಸಿಕೊಂಡಿದ್ದ. ಸದ್ಯ ಬಂಧಿತರ ವಿರುದ್ಧ ಸ್ಫೋಟಕ ವಸ್ತು ಕಾಯ್ದೆ ಸೇರಿ ವಿವಿಧ ಕಾಯ್ದೆಗಳ ಐಪಿಸಿ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಿಕೊಂಡು ಎನ್ಐಎ ತನಿಖೆ ಚುರುಕುಗೊಳಿಸಿದೆ.
ಇದನ್ನೂ ಓದಿ: ಉಗ್ರ ಸಂಘಟನೆಯೊಂದಿಗೆ ನಂಟು ಶಂಕೆ; 20 ಸ್ಥಳಗಳಲ್ಲಿ ಎನ್ಐಎ ಶೋಧ, ಬಳ್ಳಾರಿಯ ಕೆಲವರು ವಶಕ್ಕೆ