ಹೊಸ ವರ್ಷಾಚರಣೆಗೆ ರಾಜ್ಯ ಸರ್ಕಾರ ಈ ಬಾರಿ ಕೆಲವೊಂದು ಮಾನದಂಡಗಳನ್ನು ಹೊರಡಿಸಿದೆ. ಕೊರೊನಾ ಕಾರಣದಿಂದ ಈ ಮಾನದಂಡಗಳನ್ನು ಹೊರಡಿಸಿರೋದ್ರಿಂದ ಈ ಬಾರಿ ಸಂಭ್ರಮ ಕಳೆಗುಂದಲಿದೆ. ಕೊರೊನಾ ಎರಡನೇ ಅಲೆ ಆತಂಕದಿಂದಾಗಿ ಬಾರ್, ಪಬ್ಗಳು ಜನಜಂಗುಳಿಗೆ ಯಾವುದೇ ರೀತಿಯ ಅವಕಾಶ ನೀಡೋದಿಲ್ಲ ಎಂದು ಸರ್ಕಾರ ಹೇಳಿದೆ.
ದೇಶದಲ್ಲಿ ಕೊರೊನಾ ಆತಂಕ ಕಡಿಮೆಯಾಗಿದ್ದು, ಜನ ಭಯಬಿಟ್ಟು ಓಡಾಡುತ್ತಿದ್ದಾರೆ. ಸರ್ಕಾರ ಮಾತ್ರ ಕೊರೊನಾ ಹರಡುವ ಭೀತಿ ಇದೆ ಮುಂಜಾಗ್ರತಾ ಕ್ರಮ ಕೈಗೊಳ್ಳಿ ಎಂದು ಹೇಳುತ್ತಿದೆ. ಸಾರ್ವಜನಿಕರು ಒಂದೆಡೆ ಸೇರದಂತೆ, ಗುಂಪಾಗಿ ಸೇರಿ ಸಂಭ್ರಮಿಸದಂತೆ ಸರ್ಕಾರ ಈಗಾಗಲೇ ಆದೇಶ ಕೂಡಾ ನೀಡಿದೆ.
ಆದರೆ ಈಗಾಗಲೇ ಲಾಕ್‌ಡೌನ್ ದಿಂದ ಸಾಕಷ್ಟು ನಷ್ಟದಲ್ಲಿರುವ ಹೊಟೇಲ್ ಉದ್ಯಮಕ್ಕೆ ಹೊಸ ವರ್ಷದ ಸಂಭ್ರಮಾಚರಣೆ ಉದ್ಯೋಗದಲ್ಲಿ ಚೇತರಿಕೆ ತರಲಿದೆ. ಸರ್ಕಾರ ಹೇಳಿದಂತೆ ಅಗತ್ಯ ಎಚ್ಚರಿಕೆಯಿಂದ ನಡೆದುಕೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಆಚರಣೆಗೆ ನಿರ್ಬಂಧ ಹೇರಬಾರದು ಎಂದು ಹೋಟೆಲ್ ಮಾಲೀಕರು ಒತ್ತಾಯಿಸುತ್ತಿದ್ದಾರೆ.
ಹೊಸ ವರ್ಷಾಚರಣೆ ಬೇಡ ಅಂತ ಕೆಲವರು ಹೇಳ್ತಿದ್ರೆ, ಮತ್ತೆ ಕೆಲವರು ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಸಂಭ್ರಮಿಸೋ ಚಿಂತನೆಯಲ್ಲಿದ್ದಾರೆ. ಜನ ಒಂದೆಡೆ ಸೇರಿದ್ರೆ ಕೊರೊನಾ ಹರಡೋ ಸಾಧ್ಯತೆ ದಟ್ಟವಾಗಿದ್ದು, ಯಾವುದೇ ಕಾರಣಕ್ಕೂ ಆರೋಗ್ಯದ ಜೊತೆ ಚೆಲ್ಲಾಟ ಮಾಡ್ಬೇಡಿ ಎಂದು ಎಚ್ಚರಿಕೆ ನೀಡ್ತಾರೆ ವೈದ್ಯರು.
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲೂ ಕಠಿಣ ನಿಯಮಗಳನ್ನು ಅಳವಡಿಸಿಕೊಳ್ಳಲಾಗುತ್ತದೆ. ಕಾನೂನು ಉಲ್ಲಂಘನೆ ಮಾಡಿದ್ರೆ ಕ್ರಮ ಕೈಗೊಳ್ಳೋದಾಗಿ ಪೊಲೀಸ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಸರ್ಕಾರ ಎಷ್ಟೇ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಂಡರೂ ಕೂಡಾ ಕೆಲವೆಡೆ ಹೊಸ ವರ್ಷಾಚರಣೆಗಳು ನಡೆಯುತ್ತವೆ. ಸರ್ಕಾರವೂ ಕೂಡಾ ಕೆಲವೊಂದು ಷರತ್ತುಗಳನ್ನು ನೀಡಿದ್ದು, ಆ ಷರತ್ತುಗಳನ್ನು ಜನರು ಪಾಲಿಸಬೇಕಿದೆ. ಕೊರೊನಾದಿಂದ ದೂರವುಳಿದು ತಮ್ಮಆರೋಗ್ಯ ರಕ್ಷಣೆ ಮಾಡಿಕೊಳ್ಳಬೇಕಿದೆ.