ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಕೆಆರ್ ಮಾರುಕಟ್ಟೆಯನ್ನು ಬೆಂಗಳೂರು ಸ್ಮಾರ್ಟ್ಸಿಟಿ ಲಿಮಿಟೆಡ್ ಅಡಿ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗಿದೆ. ಆಡಳಿತಗಾರರಾದ ಗೌರವ್ ಗುಪ್ತಾ ಹಾಗೂ ಅಧಿಕಾರಿಗಳು ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಸ್ಮಾರ್ಟ್ಸಿಟಿ ವ್ಯವಸ್ಥಾಪಕ ನಿರ್ದೇಶಕರು ರಾಜೇಂದ್ರ ಚೋಳನ್, ದಕ್ಷಿಣ ವಲಯ ವಿಶೇಷ ಆಯುಕ್ತರು ಬಸವರಾಜು, ಪಶ್ಚಿಮ ವಲಯ ಜಂಟಿ ಆಯುಕ್ತರು ಶಿವಸ್ವಾಮಿ, ಸ್ಮಾರ್ಟ್ಸಿಟಿ ಮುಖ್ಯ ಅಭಿಯಂತರ ರಂಗನಾಥ ನಾಯ್ಕ್ ಸಾಥ್ ನೀಡಿದರು.
ಕೆ.ಆರ್ ಮಾರುಕಟ್ಟೆಯ ಬಸ್ ನಿಲ್ದಾಣ, ಜಂಕ್ಷನ್ ಅಭಿವೃದ್ಧಿ ಹಾಗೂ ಪಾದಚಾರಿ ಸುರಂಗ ಮಾರ್ಗ 17 ಕೋಟಿ ವೆಚ್ಚದಲ್ಲಿ ಹಾಗೂ ಮಾಂಸದ ಮಾರುಕಟ್ಟೆಗೆ 14 ಕೋಟಿ ವೆಚ್ಚ ಸೇರಿ ಒಟ್ಟು 33 ಕೋಟಿ ವೆಚ್ಚದ ಸ್ಮಾರ್ಟ್ಸಿಟಿ ಯೋಜನೆಗಳು ನಡೆದು ಮಾರುಕಟ್ಟೆಗೆ ಹೊಸ ರೂಪ ಸಿಗಲಿದೆ.
ಪರಿಶೀಲನೆ ಬಳಿಕ ಮಾತನಾಡಿದ ಆಡಳಿತಗಾರರು, ಕೆಆರ್ ಮಾರುಕಟ್ಟೆಯಲ್ಲಿ ಹಲವಾರು ಕಾಮಗಾರಿಗಳು ಪ್ರಾರಂಭವಾಗಲಿವೆ. ಈ ನಿಟ್ಟಿನಲ್ಲಿ ಎಲ್ಲ ಸಂಸ್ಥೆಗಳ ಸಮನ್ವಯದ ಜೊತೆಗೆ ಪಾಲಿಕೆ ಕೆಲಸ ಮಾಡಬೇಕಿದೆ. ಹೀಗಾಗಿ ಇವತ್ತು ಪರಿಶೀಲನೆ ನಡೆಸಲಾಗಿದೆ. ಕೆಆರ್ ಮಾರುಕಟ್ಟೆ ಜಂಕ್ಷನ್ ಅಭಿವೃದ್ಧಿ ಮತ್ತು ಪಾದಚಾರಿಗಳಿಗೆ ಸುಸಜ್ಜಿತ ವ್ಯವಸ್ಥೆ ಮಾಡಲು 17 ಕೋಟಿ ರೂ. ಯೋಜನೆಗೆ ಈಗಾಗಲೇ ಅನುಮೋದನೆ ಮಾಡಲಾಗಿದೆ. ಮಾಂಸದ ಮಾರುಕಟ್ಟೆಯನ್ನು ನವೀಕರಣಗೊಳಸಬೇಕಿದೆ. ಕೆಆರ್ ಮಾರುಕಟ್ಟೆಯ ಇದ್ದ ಕಟ್ಟಡವನ್ನೇ ಮುಂದುವರಿಸಲಾಗುವುದು. ಆದರೆ, ಮಾರ್ಕೆಟ್ ಸುತ್ತಮುತ್ತ ಪುನರ್ ನವೀಕರಣ ಮಾಡಲಾಗುವುದು. ಫುಟ್ಪಾತ್ ವ್ಯಾಪಾರಿಗಳಿಗೆ ವ್ಯವಸ್ಥೆ, ವಾಹನಗಳ ಓಡಾಟಕ್ಕೆ ಅನುವು ಮಾಡಿಕೊಡುವ ಯೋಜನೆಗಳು ಇದರಲ್ಲಿವೆ. ಸಮಯಬದ್ಧವಾಗಿ ಒಂದು ವರ್ಷದೊಳಗೆ ಕಾಮಗಾರಿ ಮುಗಿಸಬೇಕು. ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಎಲ್ಲಾ ಪೂರ್ವಸಿದ್ಧತೆ ನಡೆಸಲಾಗಿದೆ ಎಂದರು.
ಇನ್ನು ಬಿಬಿಎಂಪಿ ಗುತ್ತಿಗೆದಾರರಿಗೆ ತಡವಾಗಿ ಬಿಲ್ ಪಾವತಿ ಮಾಡುತ್ತಿರುವುದರ ಬಗ್ಗೆ ಪ್ರತಿಕ್ರಿಯಿಸಿ, ಇದಕ್ಕೆ ಹಲವಾರು ಕಾರಣಗಳಿವೆ. ಪಾಲಿಕೆಗೆ ಬರುವ ಆದಾಯಕ್ಕಿಂತ, ಹೆಚ್ಚಿನ ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ. ಹೀಗಾಗಿ ಬಿಲ್ ಪಾವತಿ ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ ಬರಬೇಕಾದ ಕಂದಾಯವನ್ನು ಸಮರ್ಪಕವಾಗಿ ಸಂಗ್ರಹ ಮಾಡುವುದು ಅಗತ್ಯ. ರಾಜ್ಯ ಸರ್ಕಾರಕ್ಕೂ ಪಾಲಿಕೆಯಿಂದ ಪತ್ರ ಬರೆಯಲಾಗಿದೆ ಎಂದರು.
ವ್ಯಾಕ್ಸಿನೇಷನ್ ವಿಚಾರವಾಗಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಏನು ರೂಪುರೇಷೆಯನ್ನು ಹಾಕಿದೆ ಆ ಪ್ರಕಾರ ಕ್ರಮ ತೆಗೆದುಕೊಳ್ಳಲಾಗಿದೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳನ್ನು ಸೇರಿ ಒಟ್ಟು 760 ಕ್ಕೂ ಹೆಚ್ಚು ವ್ಯಾಕ್ಸಿನ್ ಕೇಂದ್ರ ಗುರುತಿಸಲಾಗಿದೆ. 1700 ಸಿಬ್ಬಂದಿ ಕೆಲಸ ಮಾಡಲಿದ್ದಾರೆ. ಆರೋಗ್ಯ ಕಾರ್ಯಕರ್ತರಿಗೆ ಮೊದಲಿನ ಹಂತದಲ್ಲಿ ವ್ಯಾಕ್ಸಿನ್ ಕೊಡಲಾಗುವುದು ಎಂದರು.