ಬೆಂಗಳೂರು: ಭಾರಿ ಚರ್ಚೆಗೆ ಕಾರಣವಾಗಿದ್ದ ಪಕ್ಷಾಂತರಿಗಳು, ಉಪಚುನಾವಣೆಯಲ್ಲಿ ಗೆಲುವು ಸಾಧಿಸಿ, ಸಚಿವರಾಗಿ ಪ್ರಥಮ ಬಾರಿಗೆ ವಿಧಾನಸಭೆಯಲ್ಲಿ ಕಾಣಿಸಿಕೊಂಡರು.
ನೂತನ ಸಚಿವರು ತಮ್ಮ ಹಿಂದಿನ ಪಕ್ಷಗಳಾದ ಕಾಂಗ್ರೆಸ್-ಜೆಡಿಎಸ್ ನಾಯಕರನ್ನು ಭೇಟಿ ಮಾಡಿ ಸಹಕಾರ ಕೋರಿದ್ದು ವಿಶೇಷವಾಗಿತ್ತು. ರಾಜ್ಯಪಾಲರ ಭಾಷಣ ಮುಗಿದ ನಂತರ ಸುಮಾರು ಅರ್ಧ ಗಂಟೆ ಬಿಡುವಿದ್ದ ವೇಳೆ, ಸಚಿವರಾದ ರಮೇಶ್ ಜಾರಕಿಹೊಳಿ, ಬಿ.ಸಿ. ಪಾಟೀಲ್, ಎಸ್.ಟಿ. ಸೋಮಶೇಖರ್, ಗೋಪಾಲಯ್ಯ, ಶಿವರಾಮ್ ಹೆಬ್ಬಾರ್, ಭೈರತಿ ಬಸವರಾಜ್ ಸೇರಿದಂತೆ ಅನೇಕ ನೂತನ ಸಚಿವರು ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಮುಂದಿನ ಸಾಲಿನಲ್ಲಿ ಕುಳಿತಿದ್ದ ನಾಯಕರನ್ನು ಭೇಟಿ ಮಾಡಿ, ಶುಭಾಶಯ ವಿನಿಮಯ ಮಾಡಿಕೊಂಡರು.
ಮಾಜಿ ಸಿಎಂ ಸಿದ್ದರಾಮಯ್ಯ, ಹೆಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವರಾದ ಡಿ.ಕೆ. ಶಿವಕುಮಾರ್, ಆರ್.ವಿ. ದೇಶಪಾಂಡೆ, ಹೆಚ್.ಕೆ.ಪಾಟೀಲ್ ಮತ್ತಿತರ ನಾಯಕರ ಬಳಿಯೂ ಬಂದು ಸಚಿವರು ಹಸ್ತಲಾಘವ ಮಾಡಿದರು. ಈ ಸಂದರ್ಭದಲ್ಲಿ ಡಿಕೆಶಿ, ಎಸ್.ಟಿ. ಸೋಮಶೇಖರ್ ಅವರಿಗೆ ಬೆನ್ನುತಟ್ಟಿ ಶುಭ ಕೋರಿದರು.
ಉಪಚುನಾವಣೆಯಲ್ಲಿ ಸ್ಪರ್ಧಿಸಿ, ಗೆದ್ದು ಬಂದಿರುವ ಶಾಸಕರ ಪೈಕಿ 10 ಮಂದಿ ಸಚಿವರಾಗಿದ್ದಾರೆ. ಸರ್ಕಾರ ಪತನಗೊಳ್ಳುವ ಸಂದರ್ಭದಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಡಾ.ಜಿ. ಪರಮೇಶ್ವರ್, ಮಾಜಿ ಸಿಎಂ ಕುಮಾರಸ್ವಾಮಿ ಸೇರಿದಂತೆ ಅನೇಕರು ಪಕ್ಷಾಂತರಿಗಳನ್ನು ಕಟು ಶಬ್ಧ ಗಳಲ್ಲಿ ಟೀಕಿಸಿದ್ದರು. ಸುಮಾರು 1 ವರ್ಷದ ನಂತರ ಸದನದಲ್ಲಿ ಮುಖಾಮುಖಿಯಾದ ಗುರು-ಶಿಷ್ಯರು ಏನೂ ನಡೆದೇ ಇಲ್ಲವೆಂಬಂತೆ ಔಪಚಾರಿಕವಾಗಿ ಮಾತುಕತೆ ನಡೆಸಿದ್ರು.
ಸಚಿವರಾದ ಬಿ.ಸಿ. ಪಾಟೀಲ್, ಭೈರತಿ ಬಸವರಾಜ್ ಸೇರಿದಂತೆ ಮತ್ತಿತರರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರ ಜೊತೆ ಬಹಳ ಆತ್ಮೀಯವಾಗಿ ಮಾತನಾಡಿದ್ದು, ಎಲ್ಲರ ಹುಬ್ಬೇರಿಸುವಂತೆ ಮಾಡಿತು. ಸಿದ್ದರಾಮಯ್ಯನವರು ಕೂಡ ಎಲ್ಲರ ಜೊತೆ ಆತ್ಮೀಯತೆಯಿಂದಲೇ ಮಾತನಾಡಿದ ದೃಶ್ಯ ಕಂಡುಬಂತು. ಈ ಮಧ್ಯೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಇದ್ದಕ್ಕಿದ್ದಂತೆ ಜೆಡಿಎಸ್‍ನ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಮತ್ತು ಹೆಚ್ .ಡಿ. ರೇವಣ್ಣ ಅವರ ಬಳಿ ಹೋಗಿ ರಹಸ್ಯ ಮಾತುಕತೆ ನಡೆಸಿ ವಾಪಸ್ ಬಂದು ಕುಳಿತರು.
ಕೋಮು ಪ್ರಚೋದಿತ ಭಾಷಣ ಮಾಡಿದ, ಆರೋಪ ಎದುರಿಸುತ್ತಿರುವ ಸೋಮಶೇಖರ್ ರೆಡ್ಡಿ ಪ್ರತಿಪಕ್ಷ ನಾಯಕರ ಬಳಿ ಬಂದು ಮಾತುಕತೆ ನಡೆಸಿದ್ದು ವಿಶೇಷವಾಗಿತ್ತು. ಇಂದಿನ ಜಂಟಿ ಅಧಿವೇಶನದಲ್ಲಿ ವೇಷಭೂಷಣಗಳಲ್ಲೂ ಅಲ್ಪಸ್ವಲ್ಪ ವಿಶೇಷತೆಗಳು ಕಂಡುಬಂದವು. ಬಿಜೆಪಿಯ ವೈ.ಎನ್. ನಾರಾಯಣಸ್ವಾಮಿ, ಶಿವರಾಮ್ ಹೆಬ್ಬಾರ್, ಪ್ರದೀಪ್ ಶೆಟ್ಟರ್ ಮತ್ತಿತರರು ಕೇಸರಿ ಬಟ್ಟೆಗಳನ್ನು ತೊಟ್ಟು ಸದನಕ್ಕೆ ಬಂದರೆ, ಗೋಪಾಲಯ್ಯ ಮದುಮಗನಂತೆ ಕಂಗೊಳಿಸಿದರು. ಜೆಡಿಎಸ್ ಶಾಸಕ ಡಾ. ಅನ್ನದಾನಿ ಪಂಚೆ ತೊಟ್ಟು ಬಂದಿದ್ದರೆ, ಬಿ.ಸಿ.ಪಾಟೀಲ್ ಹಸಿರು ಶಾಲು ಹೊದ್ದು ಪಂಚೆ ಮತ್ತು ಶರ್ಟ್ನಲ್ಲಿ ಆಗಮಿಸಿದ್ದರು. ಒಟ್ಟಾರೆಯಾಗಿ ಸದನ ಇಂದು ವಿಶೇಷವಾಗಿ ಕಂಡುಬಂತು.