ಬೆಂಗಳೂರು: ಮಕ್ಕಳು ಶಾಲೆ ಸೇರುವ ಪ್ರಕ್ರಿಯೆ ಸುಲಭವಾಗುವ ವಾತಾವರಣ ಸೃಷ್ಟಿಸುವಂತೆ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ವಿಧಾನಸೌಧದಲ್ಲಿ ನಡೆದ ಶಾಲೆ ತೊರೆದ ಮಕ್ಕಳನ್ನು ವಾಪಸ್ ಶಾಲೆಗೆ ಕರೆ ತರುವ ರಾಜ್ಯ ಮಟ್ಟದ ಉನ್ನತ ಅಂತರ್ ಇಲಾಖಾ ಸಮಿತಿ ಸಭೆಯಲ್ಲಿ ಈ ವಿಷಯ ತಿಳಿಸಿದರು.
ಮಕ್ಕಳನ್ನು ಶಾಲೆಗೆ ಸೇರಿಸುವಾಗ ಆಧಾರ್ ಕಾರ್ಡ್, ಪಡಿತರ ಚೀಟಿ, ಜನನ ದೃಢೀಕರಣ ಪತ್ರ, ಜಾತಿ ಪ್ರಮಾಣಪತ್ರ, ವರ್ಗಾವಣೆ ಪತ್ರಗಳನ್ನು ಶಾಲೆಗಳು ಕೇಳಬಾರದು. ಮೊದಲಿಗೆ ಮಕ್ಕಳನ್ನು ಶಾಲೆಗೆ ಸೇರಿಸಿಕೊಳ್ಳಿ ಬಳಿಕ ಉಳಿದ ಪ್ರಕ್ರಿಯೆಗಳನ್ನು ಪೂರೈಸಿ ಎಂದು ಸೂಚನೆ ನೀಡಿದ್ದಾರೆ.
ವಲಸೆ ಕಾರ್ಮಿಕರ ಮಕ್ಕಳನ್ನು ಶಾಲೆಗೆ ಸೇರಿಸುವ ಸಂಬಂಧ ವಿಶೇಷ ಗಮನ ಹರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಸರ್ಕಾರಿ ಶಾಲೆಗಳು ಶೈಕ್ಷಣಿಕ ವರ್ಷಾದ್ಯಂತ ಯಾವುದೇ ಮಕ್ಕಳು ಶಾಲೆ ಸೇರುವುದನ್ನು ನಿರಾಕರಿಸಕೂಡದು ಎಂದು ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಸೂಚನೆ ನೀಡಿದ್ದಾರೆ. ಜೊತೆಗೆ ಕಾರ್ಮಿಕರ ಮಕ್ಕಳು ಶಾಲೆಗೆ ಹೋಗುವ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆ ಉಚಿತ ಸಾರಿಗೆ ಪಾಸ್ ನೀಡಲು ಕ್ರಮ ವಹಿಸಬೇಕು ಎಂದು ತಾಕೀತು ಮಾಡಿದರು.
ಇನ್ನು ಬೆಂಗಳೂರಿನಲ್ಲಿ ಶಾಲೆ ತೊರೆದ ಮಕ್ಕಳ ಅಂಕಿಅಂಶ ಹಾಗೂ ಬಸ್ ನಿಲ್ದಾಣ, ಮೇಲ್ಸೇತುವೆ, ಪಾರ್ಕ್ ಗಳಲ್ಲಿ ವಾಸಿಸುತ್ತಿರುವ ಮಕ್ಕಳ ಬಗ್ಗೆ ರಾತ್ರಿ ವೇಳೆ ಸಮೀಕ್ಷೆ ನಡೆಸುವಂತೆ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಗೆ ಮುಖ್ಯ ಕಾರ್ಯದರ್ಶಿ ಸೂಚನೆ ನೀಡಿದರು. ಆಗಸ್ಟ್ ತಿಂಗಳೊಳಗೆ ಸಮೀಕ್ಷೆ ಪೂರ್ಣಗೊಳಿಸಿ ವರದಿ ನೀಡುವಂತೆ ತಿಳಿಸಿರುವ ಅವರು ಶಿಕ್ಷಣ ಇಲಾಖೆ 6-18 ವರ್ಷದೊಳಗಿನ ಸುಮಾರು 70 ಸಾವಿರ ಮಕ್ಕಳು ಶಾಲೆ ತೊರೆದಿರುವ ಬಗ್ಗೆ ಪತ್ತೆ ಮಾಡಿದೆ ಎಂದು ಹೇಳಿದರು.
ವಿದ್ಯಾರ್ಥಿಗಳ ಅಚೀವ್ಮೆಂಟ್ ಟ್ರಾಕಿಂಗ್ ಸಿಸ್ಟಂ ಯೋಜನೆಯಡಿ ಶಾಲೆ ತೊರೆದ ಮಕ್ಕಳ ಅಂಕಿಅಂಶ ಪತ್ತೆ ಹಚ್ಚಲಾಗುತ್ತಿದೆ. ಆದರೆ ಈ ವ್ಯವಸ್ಥೆಯಡಿ ಸಾಕಷ್ಟು ನ್ಯೂನ್ಯತೆಗಳಿದ್ದು, ಈ ವ್ಯವಸ್ಥೆಗೆ ತಿದ್ದುಪಡಿ ಮಾಡಬೇಕು ಎಂದು ಸಿವಿಕ್ ಸರ್ಕಾರೇತರ ಸಂಸ್ಥೆಯ ಟ್ರಸ್ಟಿ ಕಾತ್ಯಾಯಿನಿ ಚಾಮರಾಜ್ ಅವರು ಸಲಹೆ ನೀಡಿದರು.
ಸದ್ಯ ಸತತ 60 ದಿನಗಳು ವಿದ್ಯಾರ್ಥಿಗಳು ಶಾಲೆಗೆ ಗೈರಾಗಿದ್ದರೆ, ಶಾಲೆ ತೊರೆದಿದ್ದಾರೆ ಎಂದು ಪರಿಗಣಿಸಲಾಗುತ್ತಿದೆ. ಅದರ ಬದಲು ಸತತ ಏಳು ದಿನ ಗೈರಾಗಿದ್ದರೆ ಡ್ರಾಪ್ ಔಟ್ ಎಂದು ಪರಿಗಣಿಸಬೇಕು ಎಂದು ಸಭೆಯಲ್ಲಿ ಅವರು ಸಲಹೆ ನೀಡಿದರು.