ಬೆಂಗಳೂರು: ನಗರದಲ್ಲಿ ಗಣಪತಿ ಹಬ್ಬಕ್ಕೆ ಕುಸಿತ ಕಂಡಿದ್ದ ಹೂವಿನ ಬೆಲೆ ನವರಾತ್ರಿಗೆ ಹೆಚ್ಚಳವಾಗಿದೆ. ಎಲ್ಲೆಡೆ ಹಬ್ಬದ ಸಡಗರ ಆರಂಭವಾಗಿದ್ದು, ಮಾರುಕಟ್ಟೆಯಲ್ಲಿ ಕೆಲವು ಹೂವುಗಳ ಬೆಲೆಯಲ್ಲಿ ಗಣನೀಯ ಏರಿಕೆ ಕಂಡುಬರುತ್ತಿದೆ. ಆಯುಧ ಪೂಜೆ, ವಿಜಯದಶಮಿಯ ಸಂದರ್ಭಕ್ಕೆ ಮಲ್ಲಿಗೆ ಮೊಗ್ಗು, ಕನಕಾಂಬರ, ಸೇವಂತಿಗೆ ಹೂವು ಸೇರಿದಂತೆ ಮತ್ತಿತರ ಹೂವಿನ ಬೆಲೆಗಳು ಗ್ರಾಹಕರ ಕೈಸುಡುವ ಸಾಧ್ಯತೆ ಇದೆ.
ಕನಕಾಂಬರ ಮಲ್ಲಿಗೆ, ಸೇವಂತಿಗೆ ಮತ್ತು ಕೆಂಪು ಗುಲಾಬಿ ಹೂವುಗಳ ಬೆಲೆಯಲ್ಲಿ ಹೆಚ್ಚಳವಾಗಿದೆ. ಕೆ.ಆರ್.ಮಾರುಕಟ್ಟೆಯಲ್ಲಿ ಕನಕಾಂಬರ ಹೂವು ಪ್ರತಿ ಕೆ.ಜಿಗೆ 1 ಸಾವಿರ ರೂ, ಮಲ್ಲಿಗೆ ಮೊಗ್ಗು ಕೆ.ಜಿಗೆ 600ರಿಂದ 700 ರೂ.ವರೆಗೆ ಮಾರಾಟವಾಗುತ್ತಿದೆ. ಕೆಜಿಗೆ 15 ರಿಂದ 20 ರೂ.ಗೆ ಮಾರಾಟವಾಗುತ್ತಿದ್ದ ಬಿಡಿ ಹೂವು ಕೂಡ 30 ರಿಂದ 40 ರೂ.ವರೆಗೆ ಮಾರಾಟವಾಗುತ್ತಿದೆ.
ಮಲ್ಲಿಗೆ ಮೊಳಕ್ಕೆ ಸುಮಾರು 50 ರೂ.ವರೆಗೆ ಮತ್ತು ದಿಂಡು 120ರೂ.ಗೆ, ಮಲ್ಲಿಗೆ ಹೂವಿನ ಹಾರ 1,300ರಿಂದ 1,400 ರೂ.ವರೆಗೆ ಮಾರಾಟವಾಗುತ್ತಿದೆ. ಕೆಂಪು ಗುಲಾಬಿ ಬಣ್ಣದ ಹೂವಿನ ಹಾರ 1,400 ರೂ. ವರೆಗೆ ಖರೀದಿಯಾಗುತ್ತಿದೆ.
"ಕಳೆದ ಒಂದೆರಡು ತಿಂಗಳಿಂದ ಹೂವಿಗೆ ಹೆಚ್ಚಿನ ಬೇಡಿಕೆ ಇರಲಿಲ್ಲ. ನವರಾತ್ರಿ ಆರಂಭವಾಗಿರುವುದರಿಂದ ಮಲ್ಲಿಗೆ, ಕನಕಾಂಬರ ಮತ್ತಿತರರ ಹೂವುಗಳಿಗೆ ಬೇಡಿಕೆ ಉಂಟಾಗಿದೆ" ಎಂದು ವ್ಯಾಪಾರಸ್ಥರು ತಿಳಿಸಿದ್ದಾರೆ.
"ಬೆಂಗಳೂರು ಮಾರುಕಟ್ಟೆಗೆ ಕೋಲಾರ, ಚಿಕ್ಕಬಳ್ಳಾಪುರ ಸೇರಿ ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಿಂದ ರೈತರು ಹೂವು ಪೂರೈಸುತ್ತಾರೆ. ತಮಿಳುನಾಡಿನಿಂದಲೂ ಮಲ್ಲಿಗೆ ಮೊಗ್ಗು ಪೂರೈಕೆ ಆಗುತ್ತದೆ. ಕಳೆದ ಹಲವು ದಿನಗಳಿಂದ ಹೂವಿನ ಬೆಲೆಯಲ್ಲಿ ಅಂತಹ ಹೆಚ್ಚಳ ಕಂಡುಬಂದಿರಲಿಲ್ಲ. ಆದರೆ ನವರಾತ್ರಿ ಹಬ್ಬ ಪ್ರಾರಂಭವಾದ ಹಿನ್ನೆಲೆಯಲ್ಲಿ ಈಗ ಮಲ್ಲಿಗೆ, ಕನಕಾಂಬರ, ಸೇವಂತಿಗೆ ಸೇರಿ ಇನ್ನಿತರ ಹೂವಿನ ಬೆಲೆ ಏರಿಕೆಯಾಗಿದೆ" ಎಂದು ಕೆ.ಆರ್.ಮಾರುಕಟ್ಟೆ ಸಗಟು ಹೂವು ಮಾರಾಟಗಾರರ ಸಂಘದ ಅಧ್ಯಕ್ಷ ಜಿ.ಎಂ.ದಿವಾಕರ್ ಹೇಳಿದರು.
ಇದನ್ನೂಓದಿ: ಬೆಳಗಾವಿಯಲ್ಲಿ 'ದುರ್ಗಾ ಮಾತಾ ದೌಡ್'ಗೆ ಅದ್ಧೂರಿ ಸ್ವಾಗತ