ಬೆಂಗಳೂರು: ಕಾರ್ಮಿಕ ಇಲಾಖೆಯ ಸಹಯೋಗದಲ್ಲಿ 18 ವರ್ಷ ಮೇಲ್ಪಟ್ಟ ಕಟ್ಟಡ ಕಾರ್ಮಿಕರಿಗೆ ಕೋವಿಡ್ ಲಸಿಕಾ ಅಭಿಯಾನ ನಡೆಸಬೇಕು. 15 ವರ್ಷ ಅಥವಾ ಅದಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಕಾರ್ಮಿಕರು ಇರುವಲ್ಲಿ ಹತ್ತಿರದ ನಿಗದಿತ ಖಾಸಗಿ ಸ್ಥಳಗಳನ್ನು ಗುರುತಿಸಿ, ಲಸಿಕೆ ವಿತರಣೆಗೆ ವ್ಯವಸ್ಥೆ ಮಾಡಬೇಕೆಂದು ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕಿ ಅರುಂಧತಿ ಚಂದ್ರಶೇಖರ್ ಸೂಚಿಸಿದ್ದಾರೆ.
ಇದನ್ನೂ ಓದಿರಿ: ಕೋವಿಡ್ ಲಸಿಕೆ ಪಡೆಯದವರಿಗೆ ಪಿಂಚಣಿ, ಪಡಿತರ ಇಲ್ಲವೆಂಬ ಯೋಜನೆ ರೂಪಿಸಿಲ್ಲ: ಸರ್ಕಾರದ ಸ್ಪಷ್ಟನೆ
ಈ ಬಗ್ಗೆ ಸುತ್ತೋಲೆ ಹೊರಡಿಸಿರುವ ನಿರ್ದೇಶಕಿ ಅರುಂಧತಿ ಚಂದ್ರಶೇಖರ್, ಕಟ್ಟಡ ಕಾರ್ಮಿಕರು ಹೆಚ್ಚಾಗಿ ಕೋವಿಡ್ ಪೀಡಿತರಾಗುತ್ತಿದ್ದಾರೆ. ಸಂಭಾವ್ಯ ಮೂರನೇ ಅಲೆಯ ಮುನ್ನೆಚ್ಚರಿಕೆ ಕ್ರಮವಾಗಿ ಕಾರ್ಮಿಕರು ಹಾಗೂ ಕುಟುಂಬದ ಸದಸ್ಯರಿಗೆ ರಕ್ಷಣೆ ಒದಗಿಸಬೇಕಿದೆ.
ಖಾಸಗಿ ಆರೋಗ್ಯ ಸಂಸ್ಥೆಗಳೊಂದಿಗೆ ಕೈಜೋಡಿಸಿ ಲಸಿಕಾ ಅಭಿಯಾನವನ್ನು ನಡೆಸಬೇಕು. ಕಾರ್ಮಿಕರು ಮತ್ತು ಕುಟುಂಬ ವರ್ಗದ ಅರ್ಹ ಫಲಾನುಭವಿಗಳ ಸಂಖ್ಯೆಗೆ ಅನುಗುಣವಾಗಿ ಕ್ರಿಯಾಯೋಜನೆ ರೂಪಿಸಬೇಕೆಂದು ಹೇಳಿದ್ದಾರೆ.