ಬೆಂಗಳೂರು: ನಗರದ ಶಿವಾನಂದ ವೃತ್ತದ ಮೇಲೆ ನಿರ್ಮಿಸಲಾಗಿರುವ ಮೇಲ್ಸೇತುವೆಗೆ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಮೇಲ್ಸೇತುವೆ ಎಂದು ನಾಮಕರಣ ಮಾಡಬೇಕು ಎಂದು ಬಿಜೆಪಿ ವಕ್ತಾರ ಎನ್.ಆರ್. ರಮೇಶ್ ಒತ್ತಾಯಿಸಿದ್ದಾರೆ.
ಈ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಗೆ ಪತ್ರ ಬರೆದಿರುವ ಎನ್.ಆರ್. ರಮೇಶ್, ಶಿವಾನಂದ ವೃತ್ತದ ಬಳಿ ನಿರ್ಮಿಸಲಾಗಿರುವ ಮೇಲ್ಸೇತುವೆಗೆ ಶಿವಾನಂದ ಮೇಲ್ಸೇತುವೆ ಎಂದು ನಾಮಕರಣ ಮಾಡಲು ನಿಶ್ಚಯಿಸಿರುವ ಬಗ್ಗೆ ಗೊತ್ತಾಗಿದೆ. ಆದರೆ, ಮೇಲ್ಸೇತುವೆ ಕಾಮಗಾರಿ ಪ್ರಾರಂಭವಾದಾಗಿನಿಂದಲೂ ಶಿವಾನಂದ ಸ್ಟೋರ್ಸ್ನ ಮಾಲೀಕರು ಇನ್ನಿಲ್ಲದ ತೊಂದರೆ ನೀಡಿರುವುದಲ್ಲದೇ, ಯೋಜನೆಯ ಅನುಷ್ಠಾನಕ್ಕೆ ಹಲವಾರು ಬಾರಿ ಹಲವು ರೀತಿಯ ಅಡಚಣೆಗಳನ್ನು ಉಂಟು ಮಾಡಿದ್ದಾರೆ.
ನಿಗದಿತ ಸಮಯದಲ್ಲಿ ಯೋಜನೆಯು ಪೂರ್ಣಗೊಳ್ಳಲು ಸಾಧ್ಯವಾಗದೇ ಇರುವುದಕ್ಕೆ ಪ್ರಮುಖ ಕಾರಣವೇ ಶಿವಾನಂದ ಸ್ಟೋರ್ಸ್ ನ ಮಾಲೀಕರು ಎಂಬ ವಿಷಯವೂ ಸಹ ತಿಳಿದಿದೆ ಎಂದು ಉಲ್ಲೇಖಿಸಿದ್ದಾರೆ.
ಶಿವಾನಂದ ವೃತ್ತದ ಬಳಿ ನಿರ್ಮಿಸಿರುವ ಮೇಲ್ಸೇತುವೆಗೆ ಯಾವುದೇ ಕಾರಣಕ್ಕೂ ಶಿವಾನಂದ ಮೇಲ್ಸೇತುವೆ ಎಂದು ನಾಮಕರಣ ಮಾಡಬಾರದು. ಈ ವೃತ್ತಕ್ಕೆ ಹೊಂದಿಕೊಂಡಂತೆಯೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೂ ಸಹ ಹಲವಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಶಿವಾನಂದ ವೃತ್ತದ ಬಳಿ ನಿರ್ಮಿಸಿರುವ ಮೇಲ್ಸೇತುವೆಗೆ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಮೇಲ್ಸೇತುವೆ ಎಂದು ನಾಮಕರಣ ಮಾಡುವುದೇ ಅತ್ಯಂತ ಸೂಕ್ತವಾಗಿದೆ ಎಂದು ಸ್ಥಳೀಯ ನಾಗರಿಕರು ಮತ್ತು ಸಂಘ-ಸಂಸ್ಥೆಗಳು ಒಕ್ಕೊರಲಿನಿಂದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಶಿವಾನಂದ ಮೇಲ್ಸೇತುವೆ ಕೆಳಗೆ ಪ್ಲೇ ಏರಿಯಾ ನಿರ್ಮಿಸಲು ಪಾಲಿಕೆ ಪ್ಲಾನ್ : ಸಾರ್ವಜನಿಕರಿಂದ ಟೀಕೆ