ಬೆಂಗಳೂರು: ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಚಿಲುಮೆ ಸಂಸ್ಥೆ ಮೂಲಕ ಮತದಾರರ ಮಾಹಿತಿ ದುರ್ಬಳಕೆ ಬಗ್ಗೆಯು ತನಿಖೆ ನಡೆಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, ನಕಲಿ ಮತದಾರರ ಹೆಸರು ಬಿಟ್ಟು ಹೋಗಿರುವುದರಿಂದ ಕಾಂಗ್ರೆಸ್ಸಿಗರಿಗೆ ತಾವು ಗೆಲ್ಲುವುದು ಸಾಧ್ಯವಿಲ್ಲ ಎಂದು ಅನಿಸುತ್ತಿದೆ.
ಅದಕ್ಕಾಗಿ ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ಸಿಗರ ಆರೋಪಕ್ಕೂ ನಮ್ಮ ಸರಕಾರ ಮತ್ತು ಪಕ್ಷಕ್ಕೆ ಸಂಬಂಧವಿಲ್ಲ. ಜನರಲ್ಲಿ ಭಾಜಪಾ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸುವ ಕಾಂಗ್ರೆಸ್ನ ಹತಾಶ ಪ್ರಯತ್ನ ಇದು ಎಂದು ಟೀಕಿಸಿದರು.
ಮತದಾರರ ನೋಂದಣಿ ಕುರಿತು ಜಾಗೃತಿ ಮೂಡಿಸಲು ಪಡೆದುಕೊಂಡ ಅನುಮತಿಯನ್ನು ಚಿಲುಮೆ ಸಂಸ್ಥೆ ದುರ್ಬಳಕೆ ಮಾಡಿಕೊಂಡಿದೆ ಎಂದು ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ಕೊಟ್ಟಿರುವುದರಿಂದ ತನಿಖೆ ನಡೆಯುತ್ತಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಇದೇ ಸಂಸ್ಥೆಗೆ ಗುತ್ತಿಗೆ ನೀಡಿತ್ತು, ಈಗ ಅದೇ ಸಂಸ್ಥೆಯ ವಿರುದ್ಧ ದೂರು ನೀಡಿದ್ದಾರೆ ಎಂದರು.
ನಮ್ಮ ಪಕ್ಷದ ರಾಜ್ಯ ಸರಕಾರ ಪಾರದರ್ಶಕ ಆಗಿರುವುದರಿಂದ ದೂರು ಬಂದ ಹಿನ್ನೆಲೆಯಲ್ಲಿ ಚಿಲುಮೆಗೆ ನೀಡಿರುವ ಅನುಮತಿಯನ್ನು ಬಿಬಿಎಂಪಿ ರದ್ದುಪಡಿಸಿದೆ. ಆದರೆ, ಸೋಲಿನ ಭೀತಿಯಿಂದ ಕಾಂಗ್ರೆಸ್ ಅನಗತ್ಯ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸ್ನಿಂದ 1.50 ಲಕ್ಷಕ್ಕೂ ಹೆಚ್ಚು ಅಲ್ಪಸಂಖ್ಯಾತ ಮತದಾರರ ಹೆಸರು ಅಕ್ರಮ ಸೇರ್ಪಡೆ: ಎನ್ ಆರ್ ರಮೇಶ್