ಬೆಂಗಳೂರು: ಉಡುಪಿಯ ಶಿರೂರು ಮಠಕ್ಕೆ ಬಾಲ ಪೀಠಾಧಿಪತಿ ನೇಮಕ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯಲ್ಲಿ ನ್ಯಾಯಾಲಯಕ್ಕೆ ಸಲಹೆ ನೀಡಲು ಹಿರಿಯ ವಕೀಲ ಎಸ್.ಎಸ್ ನಾಗಾನಂದ್ ಅವರನ್ನುಅಮಿಕಸ್ ಕ್ಯೂರಿ ಆಗಿ ನೇಮಕ ಮಾಡಿ ಹೈಕೋರ್ಟ್ ಆದೇಶಿಸಿದೆ.
ಈ ಕುರಿತು ಮಠದ ಲತಾವ್ಯ ಆಚಾರ್ಯ ಮತ್ತಿತರರು ಸಲ್ಲಿಸಿರುವ ಪಿಐಎಲ್ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಸಿಜೆ ಸತೀಶ್ ಚಂದ್ರ ಶರ್ಮ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿತು. ಅರ್ಜಿ ಪ್ರತಿ ಹಾಗೂ ದಾಖಲೆಗಳನ್ನು ಅಮಿಕಸ್ ಕ್ಯೂರಿ ಅವರಿಗೆ ಪೂರೈಸಬೇಕು ಎಂದು ಸೂಚಿಸಿದ ಪೀಠ ವಿಚಾರಣೆಯನ್ನು ಸೆ.23ಕ್ಕೆ ಮುಂದೂಡಿತು.
ಇದಕ್ಕೂ ಮುನ್ನ ಸೋದೆ ವಾದಿರಾಜ ಮಠದ ಪರ ವಕೀಲರು ವಾದಿಸಿ, ಬಾಲ ಸನ್ಯಾಸಿಗಳನ್ನು ನೇಮಕ ಮಾಡುವ ಸಂಪ್ರದಾಯ ಇತಿಹಾಸದುದ್ದಕ್ಕೂ ಇದೆ. ಶಂಕರಾಚಾರ್ಯರು 10ನೇ ವಯಸ್ಸಿನಲ್ಲಿ ಸನ್ಯಾಸ ಸ್ವೀಕರಿಸಿದ್ದರು. ಇದಕ್ಕೆ ಕಾನೂನಿನ ನಿರ್ಬಂಧವಿಲ್ಲ. ಬಲವಂತವಾಗಿಯೂ ಸನ್ಯಾಸ ದೀಕ್ಷೆ ನೀಡಿಲ್ಲ ಎಂದರು.
ಇದೇ ವೇಳೆ ಅರ್ಜಿದಾರರ ಪರ ವಕೀಲರು 16 ವರ್ಷದ ಬಾಲಕನನ್ನು ಪೀಠಾಧಿಪತಿ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಜತೆಗೆ ಮಕ್ಕಳ ಹಕ್ಕು ಉಲ್ಲಂಘನೆಯಾಗಿದೆ. ಈ ಕುರಿತು ನ್ಯಾಯಾಲಯ ಪರಿಶೀಲಿಸಬೇಕು ಎಂದು ಕೋರಿದರು. ಈ ಕುರಿತು ಪರಿಶೀಲಿಸುವುದಾಗಿ ತಿಳಿಸಿದ ಪೀಠ ಅಮೈಕಸ್ ಕ್ಯೂರಿ ನೇಮಿಸಿ ವಿಚಾರಣೆ ಮುಂದೂಡಿತು.