ಬೆಂಗಳೂರು: ಭಯೋತ್ಪಾದಕ ಸಂಘಟನೆ ಮತ್ತು ಅಂತಹ ಸಂಘಟನೆಗಳಿಗೆ ಬೆಂಬಲ ನೀಡುವವರ ಮೇಲೆ ಎಫ್ಐಆರ್ ಹಾಕಿಲ್ಲ. ಆದರೆ, ಧರ್ಮ ರಕ್ಷಣೆ ಮಾಡುವ ನಮ್ಮ ಶಾಸಕರು, ಕಾರ್ಯಕರ್ತರ ಮೇಲೆ ಎಫ್ಐಆರ್ ಹಾಕ್ತೀರಾ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಶಾಸಕ ಅಶ್ವತ್ಥನಾರಾಯಣ್ ಹಾಗೂ ಹರೀಶ್ ಪೂಂಜಾ ಅವರ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ. ಮೈಸೂರು ಹಾಗೂ ಬೆಳ್ತಂಗಡಿಯಲ್ಲಿ ಕೇಸ್ ಬುಕ್ ಮಾಡಿದ್ದಾರೆ. ನೀವು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹಾಗೂ ಎಸ್ಡಿಪಿಐ ಮೇಲಿರೋ ಕೇಸ್ ತೆಗೀತೀರಾ. ನಮ್ಮ ಶಾಸಕರ ಮೇಲೆ ಎಫ್ಐಆರ್ ಹಾಕ್ತೀರಾ. ಭಯೋತ್ಪಾದಕ, ನಕ್ಸಲ್ ಬೆಂಬಲಿಗರ ಪರವಾಗಿ ನಿಂತಿದ್ದೀರಾ.? ಟಿಪ್ಪು ಸುಲ್ತಾನ್ ಜಯಂತಿ ಬೇಡ ಅಂತ ಹೇಳಿದ್ದಾರೆ. ಅದಕ್ಕೆ ನಮ್ಮವರ ಮೇಲೆ ಎಫ್ಐಆರ್ ಹಾಕ್ತೀರಾ ಎಂದು ಪ್ರಶ್ನಿಸಿದರು.
ಸಚಿವ ಪ್ರಿಯಾಂಕ್ ಖರ್ಗೆ ಆರ್ಎಸ್ಎಸ್ ಬ್ಯಾನ್ ಮಾಡುತ್ತೇವೆ ಎಂದು ಹೇಳಿದ್ದಾರೆ. ಅವರಿನ್ನೂ ಮಗು ಅಂತ ಕಾಣುತ್ತದೆ, ಅವರು ಕೂಪ ಮಂಡೂಕದ ತರ ಕಾಣುತ್ತಿದ್ದಾರೆ. ಆರ್ಎಸ್ಎಸ್ ಬಡವರ, ಸಂಕಷ್ಟಕ್ಕೆ ಸಿಲುಕಿದವರ ಪರ ಕೆಲಸ ಮಾಡುವ ಸಂಘಟನೆ. ಭಯೋತ್ಪಾದಕ, ಭಯೋತ್ಪಾದನೆಗೆ ಬೆಂಬಲ ಕೊಡುವ ಸಂಘಟನೆಗಳ ಬ್ಯಾನ್ ಮಾಡುವ ತಾಕತ್ತು ನಿಮಗಿಲ್ಲ. ನಿತ್ಯ ಶಾಖೆ ನಡೆಸುವ ಸಂಘಟನೆ ಬ್ಯಾನ್ ಮಾಡ್ತೀರಾ.? ಇಂದಿರಾ ಗಾಂಧಿ ಸೇರಿದಂತೆ ಹಲವರು ಆರ್ಎಸ್ಎಸ್ ಬ್ಯಾನ್ ಮಾಡಲು ಮುಂದಾಗಿದ್ದರು. ಖರ್ಗೆ ಅವರೇ ನಿಮ್ಮ ಹಿರಿಯರನ್ನ ಕೇಳಿ ಬ್ಯಾನ್ ಮಾಡಿದರೆ ಏನಾಗುತ್ತದೆ ಎಂದು ರವಿಕುಮಾರ್ ಎಚ್ಚರಿಕೆ ನೀಡಿದ್ರು.
ಒಬ್ಬ ಪೊಲೀಸ್ ಅಧಿಕಾರಿ ಕೇಸರಿ ಬಟ್ಟೆ ಧರಿಸಿ ಬಂದಿಲ್ಲ. ಆದರೂ ಪೊಲೀಸ್ ಇಲಾಖೆ ಕೇಸರೀಕರಣ ಮಾಡಿದ್ದೀರಾ ಅಂತ ಡಿಸಿಎಂ ಡಿ ಕೆ ಶಿವಕುಮಾರ್ ಪ್ರಶ್ನೆ ಮಾಡಿದ್ದಾರೆ. ಡಿ ಕೆ ಶಿವಕುಮಾರ್ ಅವರು ಮೊದಲು ತಮ್ಮ ಗ್ಯಾರಂಟಿ ಕಾರ್ಡ್ ಘೋಷಣೆಗೆ ಹಣ ಕೊಡಲಿ, ಆಮೇಲೆ ಪೊಲೀಸ್ ಇಲಾಖೆ ಕೇಸರೀಕರಣ ಆಗಿದೆಯೋ ಇಲ್ಲವೋ ನೋಡೋಣ. ಈಗ ನಿಮ್ಮ ಸರ್ಕಾರ ಬಂದಿದೆ ಪೊಲೀಸರು ಕೆಲಸ ಮಾಡ್ತಾರೆ. ಆಗ ನಮ್ಮ ಸರ್ಕಾರ ಇತ್ತು. ಆಗಲೂ ಕೆಲಸ ಮಾಡಿದ್ದಾರೆ ಎಂದು ಟಾಂಗ್ ನೀಡಿದರು.
ಎಫ್ಐಆರ್ ಹಾಕಿ ಹೆದರಿಸಲು ಸಾಧ್ಯವಾ?: ಹೊಸ ಸರ್ಕಾರ ರಚನೆಯಾಗಿದೆ. ಆಗಲೇ ಬಿಜೆಪಿ ನಾಯಕರ ಟಾರ್ಗೆಟ್ ಪ್ರಾರಂಭವಾಗಿದೆ. ಮಾಜಿ ಸಚಿವ ಅಶ್ವತ್ಥ ನಾರಾಯಣರ ಮೇಲೆ ಹಿಂದಿನ ವಿಚಾರಕ್ಕೆ ಎಫ್ಐಆರ್ ಹಾಕಿದ್ದಾರೆ. ಹರೀಶ್ ಪೂಂಜ ಮೇಲೂ ಎಫ್ಐಆರ್ ಹಾಕಿದ್ದಾರೆ. ಹಿಂದೂಗಳ ಕೊಲೆ ಮಾಡುವ ವಿಚಾರ ಹಳೇದು. ಹಲವು ಬಾರಿ ಪ್ರಸ್ತಾಪ ಆಗಿದೆ. ಆದರೂ ಪೂಂಜಾ ಮೇಲೆ ಎಫ್ಐಆರ್ ಹಾಕುವ ಕೆಲಸ ಮಾಡಲಾಗಿದೆ. ಅವರ ಬಾಯಿ ಮುಚ್ಚಿಸುವ ಕೆಲಸ ಮಾಡಲಾಗುತ್ತಾ.? ಕಾರ್ಯಕರ್ತರನ್ನ, ಮುಖಂಡರನ್ನ ಧಮ್ಕಿ ಹಾಕಿ ಬಾಯಿ ಮುಚ್ಚಿಸ್ತೀರಾ. ಇಷ್ಟಕ್ಕೆ ಹೆದರಿಸಲು ಸಾಧ್ಯವಾ.? ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಕೂಡಾ ಪ್ರಶ್ನಿಸಿದರು.
ಕೆಲ ರೌಡಿಗಳು ಪೊಲೀಸರಿಗೆ ಧಮ್ಕಿ ಹಾಕೋದನ್ನ ನೋಡಿದ್ದೇವೆ. ಆದರೆ, ಎಕ್ಸ್ ಪೀರಿಯನ್ಸ್ ಇರೋ ಅಧಿಕಾರಿಗಳಿಗೆ ಆಡಳಿತ ನಡೆಸುವವರೇ ಧಮ್ಕಿ ಹಾಕುವ ಕೆಲಸ ಮಾಡಲಾಗುತ್ತಿದೆ. ಈ ಮೂಲಕ ಅವರ ಬಾಯಿ ಮುಚ್ಚಿಸೋ ಕೆಲಸ ಮಾಡಲಾಗ್ತಿದೆ ಎಂದು ಆರೋಪಿಸಿದರು. ಇಂದು ನೀವು ಗ್ಯಾರಂಟಿ ಕಾರ್ಡನ್ನು ಕೊಟ್ಟಿರಿ. ಗ್ಯಾರಂಟಿಗೂ ಮತ ಹಾಕಿದ್ದಾರೆ. 70 ವರ್ಷ ನೀವು ಈ ದೇಶ ಆಳಿದ್ದೀರಿ. ನೀವು ಜನರನ್ನ ವಂಚಿಸಿ, ತೇಜೋವಧೆ ಮಾಡಿ ಮತ ಪಡೆಯೋ ಕೆಲಸ ಮಾಡಿದ್ದೀರಿ. ಇಷ್ಟೇ ಸಾಕು, ನಿಮ್ಮ ಸರ್ಕಾರದ ಸಾಧನೆ ಎಲ್ಲಿಗೆ ಬಂದು ನಿಲ್ಲಲಿದೆ ಅನ್ನೋದನ್ನ ನೋಡೋಕೆ ಎಂದು ಆರೋಪ ಮಾಡಿದರು.
ಇಂದು ಕೆಲವು ಮಂತ್ರಿಗಳ ಹೇಳಿಕೆ ನೋಡಿದೆ. ಎಂ. ಬಿ ಪಾಟೀಲ್ ಹೇಳಿಕೆ ನೋಡಿ, ನೀರಾವರಿ ಇಲಾಖೆಯಲ್ಲಿ ಶೇ 40ರಷ್ಟು ಭ್ರಷ್ಟಾಚಾರ ಮಾಡಿದ್ದಾರೆ, ಅವರನ್ನೆಲ್ಲಾ ಜೈಲಿಗೆ ಕಳಿಸ್ತೀನಿ ಅಂತ ಹೇಳಿದ್ದಾರೆ, ಅವರೇನು ನೀರಾವರಿ ಮಂತ್ರಿನಾ.? ಅದರ ಅರ್ಥ ಅವರು ನೀರಾವರಿ ಮಂತ್ರಿ ಸ್ಥಾನ ಬೇಕು ಅಂತ. ಇದರ ಕಥೆ ಮುಂದೆ ಗೊತ್ತಾಗುತ್ತದೆ, ಮತ್ತೊಬ್ಬ ಸಚಿವ ಆರ್.ಎಸ್.ಎಸ್, ಬಜರಂಗದಳ ಬ್ಯಾನ್ ಮಾಡುತ್ತೇವೆ ಅನ್ನುತ್ತಾರೆ, ಅದರ ಅರ್ಥ ಹೋಮ್ ಮಿನಿಸ್ಟರ್ ಬೇಕು ಅಂತ. ಖಾತೆಗಳ ಹಂಚಿಕೆ ಆಗಿಲ್ಲ, ಆದರೆ ತಾವೇ ಆ ಖಾತೆಗೆ ವಾರಸುದಾರ ಅಂತ ಅರ್ಥ. ನಿಮ್ಮ ಈ ಬೆದರಿಕೆಗೆ ಬಿಜೆಪಿ ಸೊಪ್ಪು ಹಾಕಲ್ಲ ಎಂದು ನಾರಾಯಣಸ್ವಾಮಿ ತಿರುಗೇಟು ಕೊಟ್ಟರು.
ನೀವು ಅಧಿಕಾರಕ್ಕೆ ಬಂದಿದ್ದೀರಿ. ವಾಮ ಮಾರ್ಗವನ್ನ ಜನರಿಗೆ ತೋರಿಸಿದ್ದೀರಿ. ನೀವು ಯಾವ ಮಟ್ಟಕ್ಕೆ ಇಳಿದಿದ್ದೀರಿ ಅಂತ ಜನಕ್ಕೆ ತೋರಿಸಿದ್ದೀರಿ. ನೀವು ಮಾಡುವ ಮಾಡುವ ತಪ್ಪಿಗೆ ಲೈನ್ ಮ್ಯಾನ್, ಕಂಡಕ್ಟರ್ಗಳಿಗೆ ಸಮಸ್ಯೆ ಮಾಡಬೇಕಾ.? ಜನರಿಗೆ ಮನವಿ ಮಾಡುತ್ತೇವೆ, ಜನರು ಕೆಲಸ ಮಾಡಲು ಬರುವವರಿಗೆ ತೊಂದರೆ ಕೊಡಬೇಡಿ. ನೀವು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರನ್ನ ಪ್ರಶ್ನೆ ಮಾಡಿ. ಬಿಲ್ ಕಲೆಕ್ಟರ್, ಕಂಡಕ್ಟರ್ಗಳಿಗೆ ಸಮಸ್ಯೆ ಮಾಡಬೇಡಿ ಎಂದು ಮನವಿ ಮಾಡಿದರು.
ಇದನ್ನೂ ಓದಿ: ಜನ ನಿಮ್ಮ ಮುಖ ನೋಡಿ ಮತ ಹಾಕಿಲ್ಲ, ಗ್ಯಾರಂಟಿ ಕಾರ್ಡ್ ನೋಡಿ ವೋಟ್ ಕೊಟ್ಟಿದ್ದಾರೆ : ಪ್ರತಾಪ್ ಸಿಂಹ