ಬೆಂಗಳೂರು : ಕೊನೆಗೂ ಬಹುದಿನಗಳ ಬೇಡಿಕೆಯೊಂದು ಈಡೇರಿದಂತಾಗಿದೆ. ಆ.29ರಂದು ಮೈಸೂರು ರಸ್ತೆಯಿಂದ ಕೆಂಗೇರಿವರೆಗಿನ ನಮ್ಮ ಮೆಟ್ರೋ ವಿಸ್ತರಿತ ಮಾರ್ಗವನ್ನು ಸಿಎಂ ಬಸವರಾಜ ಬೊಮ್ಮಾಯಿಯವರು ಲೋಕಾರ್ಪಣೆ ಮಾಡಲಿದ್ದಾರೆ.
ಲೋಕಾಪರ್ಣೆಗೆ ಸಿದ್ಧವಾಗುತ್ತಿರುವ ಮೈಸೂರು ರಸ್ತೆ ಟು ಕೆಂಗೇರಿವರೆಗೆ ನಮ್ಮ ಮೆಟ್ರೋ ಮಾರ್ಗದ ಸುರಕ್ಷತಾ ತಪಾಸಣೆಯನ್ನು ಈಗಾಗಲೇ ನಡೆಸಲಾಗಿದೆ. ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತ ಅಭಯ್ ಕುಮಾರ್ ರಾಯ್ ಎರಡು ದಿನಗಳ ಪರಿಶೀಲನೆ ನಡೆಸಿದ್ದಾರೆ.
ಕಳೆದ ಮೂರು ತಿಂಗಳಿನಿಂದ ಈ ಮಾರ್ಗದಲ್ಲಿ ಟ್ರಯಲ್ ರನ್ ನಡೆಸಲಾಗಿದೆ. ಇದೀಗ ವಾಣಿಜ್ಯ ಸಂಚಾರಕ್ಕೆ ಸಿದ್ಧಗೊಂಡಿದೆ. ಒಟ್ಟು 7.5 ಕಿಮೀ ಉದ್ದದ 6 ಎತ್ತರಿಸಿದ ನಿಲ್ದಾಣ ಇರುವ ಮಾರ್ಗ ಇದಾಗಿದೆ. 1,560 ಕೋಟಿ ವೆಚ್ಚದಲ್ಲಿ ಈ ಮಾರ್ಗ ನಿರ್ಮಾಣಗೊಂಡಿದೆ. ಭೂ ಸ್ವಾದೀನಕ್ಕಾಗಿ 360 ಕೋಟಿ ವೆಚ್ಚವಾಗಿದೆ.
ನಾಯಂಡಹಳ್ಳಿ-ಕೆಂಗೇರಿ ಮಾರ್ಗ ಸುರಕ್ಷಿತ ಎಂದು ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಬಿಎಂಆರ್‌ಸಿಎಲ್ ವಾಣಿಜ್ಯ ಸಂಚಾರ ಶುರು ಮಾಡಲಿದೆ. ಮೆಟ್ರೋ ಸೇವೆ ಶುರುವಾದರೆ ದಿನಕ್ಕೆ 75 ಸಾವಿರ ಪ್ರಯಾಣಿಕರು ಸಂಚರಿಸುವ ನಿರೀಕ್ಷೆ ಇದೆ.
ಪೂರ್ವ-ಪಶ್ಚಿಮ ಕಾರಿಡಾರ್ ಮಾರ್ಗದ ಉದ್ದ 18.1ಕಿ.ಮೀ.ಗೆ ಹೆಚ್ಚಳವಾಗಿದೆ. ನಮ್ಮ ಮೆಟ್ರೋ ಯೋಜನೆಯ ಹಂತ-2ರ ಅಡಿ ನಾಯಂಡಹಳ್ಳಿಯಿಂದ ಕೆಂಗೇರಿಯವರೆಗೆ ರೀಚ್ 2ರ ವಿಸ್ತರಣಾ ಕಾಮಗಾರಿ ಇದಾಗಿದೆ. ನಾಯಂಡಳ್ಳಿ, ರಾಜರಾಜೇಶ್ವರಿನಗರ, ಜ್ಞಾನಭಾರತಿ, ಪಟ್ಟಣಗೆರೆ, ಕೆಂಗೇರಿ ಬಸ್ ಟರ್ಮಿನಲ್ ಹಾಗೂ ಕೆಂಗೇರಿ ನಿಲ್ದಾಣಗಳಿವೆ.
ಇದರಲ್ಲಿ ನಾಯಂಡಳ್ಳಿ, ರಾಜರಾಜೇಶ್ವರಿನಗರ, ಜ್ಞಾನಭಾರತಿ ನಿಲ್ದಾಣಗಳಲ್ಲಿ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲಾಗಿದೆ. ಕೆಂಗೇರಿ ಬಸ್ ಟರ್ಮಿನಲ್ ನಿಲ್ದಾಣದಲ್ಲಿ ಎರಡು ಅಂತಸ್ತಿನ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲಾಗಿದೆ. ಕೆಂಗೇರಿ ಬಸ್ ಟರ್ಮಿನಲ್ ನಿಲ್ದಾಣ ಹೊರತುಪಡಿಸಿ ಉಳಿದ ಎಲ್ಲಾ ನಿಲ್ದಾಣಗಳನ್ನು ರಸ್ತೆದಾಟಲು ಪಾದಚಾರಿ ಮಾರ್ಗ ಕಲ್ಪಿಸಲಾಗಿದೆ.
ಬೈಯಪ್ಪನಹಳ್ಳಿಯಿಂದ ಕೆಂಗೇರಿಗೆ ಪ್ರಯಾಣಿಸಲು 56 ರೂ. ದರ ನಿಗದಿಪಡಿಸಲಾಗಿದೆ. ಕೆಂಗೇರಿಯಿಂದ ಸಿಲ್ಕ್ ಇನ್ಸ್ಟಿಟ್ಯೂಟ್ವರೆಗೆ 60 ರೂ.ದರ ನಿಗದಿಪಡಿಸಲಾಗಿದೆ.
ಓದಿ: ಎಐಸಿಸಿಗೆ ಇನ್ನೂ ಖಾಯಂ ಅಧ್ಯಕ್ಷರನ್ನು ನೇಮಕ ಮಾಡಲು ಆಗಿಲ್ಲ : ಕೆ ಎಸ್ ಈಶ್ವರಪ್ಪ ವ್ಯಂಗ್ಯ