ಬೆಂಗಳೂರು: ಮೈಸೂರು ಮಹಾನಗರ ಪಾಲಿಕೆ ಸದಸ್ಯ ಸ್ಥಾನದಿಂದ ನೂತನ ಮೇಯರ್ ಎಸ್.ರುಕ್ಮಿಣಿ ಮಾದೇಗೌಡ ಅವರನ್ನು ಅನರ್ಹಗೊಳಿಸಿ ಸ್ಥಳೀಯ ನ್ಯಾಯಾಲಯ ಹೊರಡಿಸಿರುವ ಆದೇಶಕ್ಕೆ ನೀಡಿರುವ ಮಧ್ಯಂತರ ತಡೆಯಾಜ್ಞೆಯನ್ನು ಹೈಕೋರ್ಟ್ ವಿಸ್ತರಿಸಿದೆ.
ಓದಿ: ಪಕ್ಷದ ಐವರು ಕಾರ್ಯಾಧ್ಯಕ್ಷರಿಗೆ ಜಿಲ್ಲಾವಾರು ಜವಾಬ್ದಾರಿ ಹಂಚಿಕೆ ಮಾಡಿದ ಡಿಕೆಶಿ
ಮೈಸೂರು ಮಹಾನಗರ ಪಾಲಿಕೆ ಸದಸ್ಯ ಸ್ಥಾನದಿಂದ ತಮ್ಮನ್ನು ಅರ್ನಹಗೊಳಿಸಿ ಮೈಸೂರು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಹೊರಡಿಸಿರುವ ಆದೇಶ ರದ್ದುಪಡಿಸುವಂತೆ ಕೋರಿ ರುಕ್ಮಿಣಿ ಸಲ್ಲಿಸಿರುವ ಅರ್ಜಿಯನ್ನು ಇಂದು ನ್ಯಾ. ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಕೆಲಕಾಲ ವಾದ ಪ್ರತಿವಾದ ಆಲಿಸಿದ ಪೀಠ, ಪ್ರತಿವಾದಿ ಹಾಗೂ ಚುನಾವಣೆಯಲ್ಲಿ ರುಕ್ಷ್ಮಿಣಿ ಎದುರು ಸೋಲು ಅನುಭವಿಸಿದ್ದ ಗೀತಾ ಮತ್ತು ಚುನಾವಣಾಧಿಕಾರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು. ಅಲ್ಲದೆ, ಅರ್ಜಿಯ ಮುಂದಿನ ಆದೇಶದವರೆಗೆ ರುಕ್ಮಿಣಿ ಅವರನ್ನು ಪಾಲಿಕೆಯ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿರುವ ವಿಚಾರಣಾ ನ್ಯಾಯಾಲಯದ ಆದೇಶಕ್ಕೆ 2021 ಜ. 7ರಂದು ನೀಡಿದ್ದ ತಡೆಯಾಜ್ಞೆಯನ್ನು ಮುಂದಿನ ವಿಚಾರಣೆವರೆಗೂ ವಿಸ್ತರಿಸಿ ಆದೇಶಿಸಿತು.
ಪ್ರಕರಣದ ಹಿನ್ನೆಲೆ: ಚುನಾವಣೆ ವೇಳೆ ಆಸ್ತಿ ವಿವರ ಮುಚ್ಚಿಟ್ಟ ಆರೋಪ ಸಂಬಂಧ ಪಾಲಿಕೆ ಸದಸ್ಯ ಸ್ಥಾನದಿಂದ ರುಕ್ಮಿಣಿ ಅವರನ್ನು ಅನರ್ಹಗೊಳಿಸಲು ಕೋರಿ ಪರಾಜಿತ ಅಭ್ಯರ್ಥಿ ರಜಿನಿ ಅಣ್ಣಯ್ಯ ದೂರು ನೀಡಿದ್ದರು.
ಅದನ್ನು ಪುರಸ್ಕರಿಸಿದ್ದ ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ, ರುಕ್ಮಿಣಿ ಅವರ ಪಾಲಿಕೆಯ ಸದಸ್ಯತ್ವವನ್ನು ರದ್ದುಪಡಿಸಿ 2020ರ ಡಿ. 14ರಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ರುಕ್ಮಿಣಿ ಅವರು ಹೈಕೋರ್ಟ್‌ಗೆ ಡಿ. 23ರಂದು ಅರ್ಜಿ ಸಲ್ಲಿಸಿದ್ದು, ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ವಿಚಾರಣಾ ನ್ಯಾಯಾಲಯದ ಆದೇಶಕ್ಕೆ ಜ. 7ರಂದು ತಡೆಯಾಜ್ಞೆ ನೀಡಿದೆ.