ಬೆಂಗಳೂರು : ನನ್ನ ಮಗ ಯಾವುದೇ ತಪ್ಪು ಮಾಡಿಲ್ಲ. ಆತ ಯಾವುದೇ ಡ್ರಗ್ಸ್ ಕೇಸ್ನ ಕಿಂಗ್ಪಿನ್ ಅಲ್ಲ. ಸುಖಾಸುಮ್ಮನೆ ಪ್ರಕರಣದಲ್ಲಿ ನನ್ನ ಮಗನನ್ನು ಬಲಿಪಶು ಮಾಡಲಾಗಿದೆ ಎಂದು ಡ್ರಗ್ಸ್ ಕೇಸ್ನಲ್ಲಿ ಬಂಧಿತನಾಗಿರುವ ವಿರೇನ್ ಖನ್ನಾ ತಂದೆ ಶ್ರೀರಾಮ್ ಖನ್ನಾ ಪುತ್ರನನ್ನ ಸಮರ್ಥಿಸಿಕೊಂಡಿದ್ದಾರೆ.
ಸಿಸಿಬಿ ಕಚೇರಿಗೆ ದೌಡಾಯಿಸಿ ಆಧಿಕಾರಿಗಳ ಭೇಟಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಖನ್ನಾ, 2007ರಿಂದಲೂ ನಾವು ನಗರದಲ್ಲಿ ಉಳಿದುಕೊಂಡಿದ್ದೇವೆ. ಕೆಲಸ ಬಿಟ್ಟು ನನ್ನ ಮಗ ಡ್ರಗ್ಸ್ ತಂಟೆಗೆ ಹೋದವನಲ್ಲ. ಇನೋವೇಟರ್ ಬ್ಯುಸಿನೆಸ್ ಮಾಡುವ ವಿರೇನ್ ನಗರದ ಪ್ರತಿಷ್ಠಿತ ಹೋಟೆಲ್ಗಳಲ್ಲಿ ಪಾರ್ಟಿ ಆಯೋಜನೆ ಮಾಡುತ್ತಾನೆ. ಪೊಲೀಸ್ ಅನುಮತಿ ಪಡೆದುಕೊಂಡೇ ಪಾರ್ಟಿ ಆಯೋಜಿಸುತ್ತಿದ್ದ.
ಆಲ್ಕೋಹಾಲ್ ಪಾರ್ಟಿ ಬಿಟ್ಟರೆ ಗಾಂಜಾ-ಡ್ರಗ್ಸ್ ಪಾರ್ಟಿ ನಡೆಸುತ್ತಿರಲಿಲ್ಲ. ಸರಬರಾಜು ಸಹ ಮಾಡುತ್ತಿರಲಿಲ್ಲ. ಹಲವು ವರ್ಷಗಳಿಂದ ಪಾರ್ಟಿ ಆಯೋಜನೆ ಮಾಡುವುದನ್ನು ಬಿಟ್ಟರೆ, ಬೇರೆ ಯಾವ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿಲ್ಲ. ದಯವಿಟ್ಟು ಇದನ್ನು ಒಂದೇ ದಿಕ್ಕಿನಿಂದ ನೋಡಿ ನಿರ್ಧಾರಕ್ಕೆ ಬರಬೇಡಿ. ಎರಡು ಕಡೆಯಿಂದಲೂ ಪರಾಮರ್ಶಿಸಿದಾಗ ಸತ್ಯ ಬರಲಿದೆ ಎಂದು ಕಣ್ಣೀರು ಹಾಕಿ, ಕೈ ಮುಗಿದು ಮನವಿ ಮಾಡಿಕೊಂಡರು.
ಪೊಲೀಸ್ ಸಮವಸ್ತ್ರ ಮನೆಯಲ್ಲಿ ಸಿಕ್ಕಿರುವ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ದೀಪಾವಳಿ, ಹೋಲಿ ಪಾರ್ಟಿ ಹಾಗೂ ಹೊಸ ವರ್ಷ ಸೇರಿದಂತೆ ಸನ್ನಿವೇಶಕ್ಕೆ ತಕ್ಕಂತೆ ವಿವಿಧ ವಸ್ತ್ರಗಳನ್ನು ಧರಿಸಿ ಪಾರ್ಟಿ ಮಾಡಿದ್ದಾನೆ. ಅದೇ ರೀತಿ ಪೊಲೀಸ್ ಯೂನಿಫಾರ್ಮ್ ಧರಿಸಿರುವುದು ತಪ್ಪಾ? ಎಂದು ಪ್ರಶ್ನಿಸಿದರು.
ಪ್ರಕರಣದಲ್ಲಿ ಬಂಧಿತರಾಗಿರುವ ರಾಗಿಣಿ, ರವಿಶಂಕರ್ ಪರಿಚಯ ವಿರೇನ್ಗೆ ಗೊತ್ತಿಲ್ಲ. ಸುಖಾಸುಮ್ಮನೆ ನನ್ನ ಮಗನನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ. ರವಿಶಂಕರ್ ಮೂಲಕ ನನ್ನ ಮಗನ ಹೆಸರು ಹೇಳಿದ್ದಾನೆ. ಆದರೆ, ಮಗನಿಗೆ ರವಿಶಂಕರ್, ರಾಗಿಣಿ ಪರಿಚಯವೇ ಇಲ್ಲ. ಕೊರೊನಾ ಸಮಯದಲ್ಲಿ ನನ್ನ ಮಗ ಪಾರ್ಟಿ ಮಾಡಿಯೇ ಇಲ್ಲ. ಮಾರ್ಚ್ ತಿಂಗಳಲ್ಲಿ ಹೋಲಿ ಪಾರ್ಟಿ ಮಾಡಿದ್ದೇ ಕೊನೆ. ಈ ಬಗ್ಗೆ ದಾಖಲೆ ನೀಡಲು ನಾನು ಸಿದ್ಧ. ನನ್ನ ಮಗ ಡ್ರಗ್ಸ್ ಪೆಡ್ಲರ್ ಅಲ್ಲ. ಆತನೋರ್ವ ಇನೋವೇಟರ್ ಎಂದು ಸಮರ್ಥಿಸಿಕೊಂಡಿದ್ದಾರೆ.
ಖನ್ನಾ ಮೇಲೆ ಇಡಿಯಿಂದ ಅಕ್ರಮ ಹಣ ವರ್ಗಾವಣೆ ತಡೆ ಕೇಸ್ ಸಂಬಂಧಿಸಿದಂತೆ ಮಾತನಾಡಿರುವ ಶ್ರೀರಾಮ್ ಖನ್ನಾ, ವಿರೇನ್ ಖನ್ನಾ ಎರಡು ಬ್ಯಾಂಕ್ ಖಾತೆ ಹೊಂದಿದ್ದಾನೆ. ತೆರಿಗೆ ಪಾವತಿ ಸಂಬಂಧ ಎಲ್ಲಾ ದಾಖಲಾತಿಗಳು ನನ್ನ ಬಳಿಯಿವೆ. ಮಗನ ವಿಚಾರವಾಗಿ ಮಾಧ್ಯಮಗಳಲ್ಲಿ ಕಳೆದ 9 ದಿನಗಳಿಂದ ಬರುತ್ತಿರುವ ಸುದ್ದಿ ಶುದ್ಧ ಸುಳ್ಳಾಗಿದೆ ಎಂದರು.