ಬೆಂಗಳೂರು : ಸಹೋದರಿಗೆ ಕಪಾಳಮೋಕ್ಷ ಮಾಡಿದ್ದಕ್ಕೆ ಸಹೋದರ ಸೇರಿ ಇಬ್ಬರು, ಸ್ನೇಹಿತನನ್ನೇ ಕೊಲೆಗೈದಿರುವ ಪ್ರಕರಣ ಪುಲಕೇಶಿನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣ ಸಂಬಂಧ ಕಾಕ್ಸ್ ಟೌನ್ ನಿವಾಸಿ ಆನಂದನ್ ಅಲಿಯಾಸ್ ಚೋಕಿ ಮತ್ತು ಎಂ ವಿಜಯ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ಅ.23ರಂದು ರಾತ್ರಿ 10.30ರ ಸುಮಾರಿಗೆ ಪ್ರಭುವಿಗೆ ಇರಿದು ಕೊಲೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆಎಚ್‌ಬಿ ಕ್ವಾಟ್ರರ್ಸ್‌ನ ಕಾಟೇರಮ್ಮ ದೇವಾಲಯದ ಹತ್ತಿರದ ವಿನಿತ್ ಪ್ಲೇಗ್ರೌಂಡ್ ಬಳಿ ಅ.23ರಂದು ರಾತ್ರಿ 10.30ರ ಸುಮಾರಿಗೆ ಆರೋಪಿಗಳು ಹಾಗೂ ಪ್ರಭು ಮದ್ಯ ಸೇವಿಸುತ್ತಿದ್ದರು. ಈ ವೇಳೆ ಆನಂದನ್ ಸಹೋದರಿ ಅದೇ ಮಾರ್ಗದಲ್ಲಿ ಹೋಗಿದ್ದು, ಸಹೋದರನನ್ನು ಕಂಡ ಯುವತಿ ಇಲ್ಲಿ ಯಾಕೆ ಕುಳಿತಿದ್ದೀಯಾ ಎಂದು ಪ್ರಶ್ನಿಸಿದ್ದಾರೆ. ಆಗ ಪ್ರಭು, ಏಕಾಏಕಿ ಕಪಾಳಮೋಕ್ಷ ಮಾಡಿದ್ದಾನೆ ಎಂದು ಹೇಳಲಾಗ್ತಿದೆ.
ಅದೇ ವಿಚಾರಕ್ಕೆ ಗೆಳೆಯರ ನಡುವೆ ಜಗಳ ನಡೆದಿದ್ದು, ಜಗಳ ವಿಕೋಪಕ್ಕೆ ತಿರುಗಿ ಆರೋಪಿಗಳು ಪ್ರಭುವಿಗೆ ಇರಿದಿದ್ದಾರೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಅಪ್ರಾಪ್ತ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ: ಶಿಕ್ಷಕನ ಬಂಧನ