ಬೆಂಗಳೂರು : ಲಕ್ಷ್ಮಿಕಾಂತ್ ಎಂಬಾತನ ಮನೆ ಮುಂದೆ ಆರೋಪಿಗಳಾದ ಸೂರ್ಯ ಹಾಗೂ ಚಂದನ್ ಎಂಬುವರು ಬೈಕ್ ವ್ಹೀಲಿಂಗ್ ಮಾಡುತ್ತಿದ್ದರು. ಇದರಿಂದ ಕೋಪಗೊಂಡ ಲಕ್ಷ್ಮಿಕಾಂತ್ ಸ್ನೇಹಿತ ಥಾಮಸ್, ಆರೋಪಿ ಚಂದನ್ ತಂದೆ ಬಳಿ ಈ ವಿಷಯ ಹೇಳುತ್ತಾನೆ. ಇದರಿಂದ ಕೋಪಗೊಂಡ ಅವರು, ಸಹಚರರೊಂದಿಗೆ ಗುಂಪುಕಟ್ಟಿಕೊಂಡು ಬಂದು ಥಾಮಸ್ನನ್ನು ಕೊಲೆಗೈಯುತ್ತಾರೆ.
ಥಾಮಸ್ನನ್ನು ಕೊಲೆ ಮಾಡಿದ ಆರೋಪದಡಿ ಆರು ಮಂದಿ ಆರೋಪಿಗಳನ್ನು ಕೆ.ಪಿ.ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ. ಕಳೆದ ವಾರ ಥಾಮಸ್ ಎಂಬಾತನ ಕೊಲೆ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದರು. ಬಳಿಕ ಇನ್ಸ್ಪೆಕ್ಟರ್ ಸದಾನಂದ ನೇತೃತ್ವದ ತಂಡವು ಕಾರ್ಯಾಚರಣೆ ನಡೆಸಿ ಸೂರ್ಯ, ಚಂದನ್, ಪ್ರಮೋದ್, ಯಶವಂತ್ ಹಾಗೂ ಚೇತನ್ ಸೇರಿ ಆರು ಜನ ಆರೋಪಿಗಳನ್ನು ಬಂಧಿಸಿ, ಹೆಚ್ಚಿನ ವಿಚಾರಣೆಗೊಳಪಡಿಸಿದ್ದರು.
ಪೈಪ್ಲೈನ್ನಲ್ಲಿ ವಾಸವಾಗಿದ್ದ ಥಾಮಸ್ ಅನಿಮೇಶನ್ ಕೋರ್ಸ್ ಮಾಡಿಕೊಂಡಿದ್ದ. ಇತ್ತೀಚೆಗೆ ಥಾಮಸ್ ಸ್ವಿಗ್ಗಿ ಕಂಪನಿಯಲ್ಲಿ ಸಹ ಕೆಲಸ ಮಾಡುತ್ತಿದ್ದ.
ಈತನ ಸ್ನೇಹಿತ ಲಕ್ಷ್ಮಿಕಾಂತ್ ಎಂಬಾತನ ಮನೆ ಮುಂದೆ ಆರೋಪಿಗಳಾದ ಸೂರ್ಯ ಹಾಗೂ ಚಂದನ್ ಬೈಕ್ ವ್ಹೀಲಿಂಗ್, ಸಿಗರೇಟ್ ಸೇದುವುದು ಸೇರಿದಂತೆ ಇನ್ನಿತರ ಅನೈತಿಕ ಚಟುವಟಿಕೆ ನಡೆಸುತ್ತಿದ್ದರು.
ಇದರಿಂದ ಅಸಮಾಧಾನಗೊಂಡಿದ್ದ ಲಕ್ಷ್ಮಿಕಾಂತ್, ಸ್ನೇಹಿತ ಥಾಮಸ್ ಬಳಿ ಹೇಳಿಕೊಂಡಿದ್ದ. ಇದೇ ವಿಚಾರಕ್ಕಾಗಿ ಎರಡು ಬಣಗಳ ನಡುವೆ ಮಾತಿನ ಚಕಮಕಿ ಉಂಟಾಗಿತ್ತು.
ಇದನ್ನೂ ಓದಿ: ದಿ ಕಾಶ್ಮೀರ್ ಫೈಲ್ಸ್ ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡಬೇಕು : ಗೃಹ ಸಚಿವ ಆರಗ
ತದನಂತರ ಥಾಮಸ್ ಆರೋಪಿ ಚಂದನ್ ತಂದೆ ಬಳಿ ಹೋಗಿ ನಡೆದ ವಿಚಾರ ಹೇಳಿ, ಬುದ್ಧಿ ಹೇಳುವಂತೆ ಕೋರಿಕೊಂಡಿದ್ದ. ಈ ವಿಚಾರ ತಿಳಿದುಕೊಂಡ ಚಂದನ್, ಸಹಚರರೊಂದಿಗೆ ಬಂದು ಥಾಮಸ್ ಜೊತೆ ಗಲಾಟೆ ಮಾಡಿದ್ದ.
ಡ್ರ್ಯಾಗರ್ ಹಾಗೂ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಕೃತ್ಯದಲ್ಲಿ ಭಾಗಿಯಾಗಿರುವ ಇನ್ನೂ ಮೂವರ ಪತ್ತೆಗೆ ಕೆ.ಪಿ.ಅಗ್ರಹಾರ ಪೊಲೀಸರು ಶೋಧ ನಡೆಸುತ್ತಿದ್ದಾರೆ.