ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೆಲ ದಿನಗಳ ಹಿಂದಷ್ಟೇ ನಟೋರಿಯಸ್ ಸುಲಿಗೆಕೋರರನ್ನು ಕೊಲೆ ಮಾಡಿದ್ದ, ಐವರು ಹಂತಕರನ್ನು ಜೆ.ಜೆ. ನಗರ ಪೊಲೀಸರು ಬಂಧಿಸಿದ್ದಾರೆ.
ಇದೇ ತಿಂಗಳು 13 ರಂದು ಮೈಸೂರು ರಸ್ತೆಯ ಹಳೇ ಗುಡ್ಡದಹಳ್ಳಿ ಏರಿಯಾದಲ್ಲಿ, ಸುಲಿಗೆಕೋರ ಶೋಯಬ್ ಪಾಷಾ ಎಂಬಾತನನ್ನು ಕೊಲೆ ಮಾಡಿದ ಆರೋಪದಡಿ ರಾಯಣ್ಣ, ವಸೀಂ, ಅಬ್ರಾನ್, ಸಮೀರ್ ಹಾಗೂ ಬಾಬು ಎಂಬುವವರನ್ನ ಪೊಲೀಸರು ಬಂಧಿಸಿದ್ದಾರೆ.
![Murder case](https://etvbharatimages.akamaized.net/etvbharat/prod-images/5728660_bng.jpg)
ಕದ್ದ ಹಣ ಹಂಚಿಕೆ ವಿಚಾರದಲ್ಲಿ ಮೃತ ಶೋಯೆಬ್ ಹಾಗೂ ಗೆಳೆಯರಾಗಿರುವ ಆರೋಪಿಗಳ ನಡುವೆ ಗಲಾಟೆ ನಡೆದಿತ್ತು. ಈ ಜಗಳ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿತ್ತು. ಈ ಸಂಬಂಧ ಜೆ.ಜೆ.ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರು ಹಾಗೂ ಕೊಲೆಯಾದ ವ್ಯಕ್ತಿ ಹಲವು ಪ್ರಕರಣದಲ್ಲಿ ಭಾಗಿಯಾಗಿ, ಈ ಗ್ಯಾಂಗ್ ಬೆಂಗಳೂರಷ್ಟೇ ಅಲ್ಲದೇ ಮುಂಬೈ ಸೇರಿದಂತೆ ಹಲವು ರಾಜ್ಯದಲ್ಲಿ ಕೃತ್ಯವೆಸಗಿತ್ತು. ಕಳ್ಳತನವನ್ನೇ ಕಾಯಕವನ್ನಾಗಿ ಮಾಡಿಕೊಂಡಿದ್ದ, ಆರೋಪಿಗಳು ಫ್ಲೈಟ್ ಮುಖಾಂತರ ತೆರಳಿ ಪಿಕ್ ಪಾಕೆಟ್, ರಾಬರಿ ಸೇರಿದಂತೆ ವಿವಿಧ ಅಪರಾಧ ಕೃತ್ಯವೆಸಗಿ ಬರುತ್ತಿದ್ದರು. ಕೊಲೆಯಾದ ಶೋಯಬ್ ವಿರುದ್ಧ ನಗರದಲ್ಲಿ 17ಕ್ಕೂ ಅಧಿಕ ಪ್ರಕರಣ ದಾಖಲಾಗಿತ್ತು.