ಬೆಂಗಳೂರು: ತಾಯಿ ಎಂಬ ಪದ ಬಳಸಿದ್ದಕ್ಕೆ ಕಣ್ಣೀರು ಬಂದಿತ್ತೇ ಹೊರತು, ಅದು ಮತ ಸೆಳೆಯಲು ಮಾಡಿದ ತಂತ್ರ ಅಲ್ಲ. ನಾನು ಮಾಡಿರುವ ಕೆಲಸವನ್ನು ಮುಂದಿಟ್ಟುಕೊಂಡು ಮತಭಿಕ್ಷೆ ಬೇಡುತ್ತೇನೆಯೇ ವಿನಃ ಬೇರೆ ಯಾವುದನ್ನೂ ಜನರ ಮುಂದಿಟ್ಟು ಮತ ಕೇಳಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ಬಿಜೆಪಿ ಅಭ್ಯರ್ಥಿ ಮುನಿರತ್ನ ತಿರುಗೇಟು ನೀಡಿದ್ದಾರೆ.
ವೈಯಾಲಿಕಾವಲ್ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತೀರಿ ಹೋಗಿರುವ ನನ್ನ ತಾಯಿಯ ನೋವು ನನಗಿದೆ. ಬೇರೆ ಯಾವುದೇ ವಿಷಯ ಆಗಿದ್ದರೂ ನಾನು ಕಣ್ಣೀರು ಹಾಕುತ್ತಿರಲಿಲ್ಲ, ಕಣ್ಣೀರು ಸುರಿಸಿ ಮತ ಕೇಳುವುದು, ನಾಟಕದ ಜೀವನ ಮಾಡುವುದು ನನಗೆ ಗೊತ್ತಿಲ್ಲ, ನಾನು ಆ ರೀತಿ ಜೀವನ ಮಾಡಿಕೊಂಡು ಬಂದವನೂ ಅಲ್ಲ ಎಂದು ಡಿ ಕೆ ಸಹೋದರರಿಗೆ ಟಾಂಗ್ ನೀಡಿದರು.
ಡಿ ಕೆ ಸಹೋದರರಿಂದ ಸಿನಿಮಾ ರಿಲೀಸ್:
25 ವರ್ಷ ಹಿಂದೆ ತಾಯಿಯನ್ನು ಕಳೆದುಕೊಂಡಿದ್ದೇನೆ. ಅವರ ಹೆಸರು ಪ್ರಸ್ತಾಪದ ಹಿನ್ನೆಲೆಯಲ್ಲಿ ಕಣ್ಣೀರು ಹಾಕಿದೆ ಅಷ್ಟೇ. ಅದಕ್ಕೆ ಕೆಲವರು ಆ್ಯಕ್ಷನ್, ಕಟ್, ಶೂಟಿಂಗ್, ಸಿನಿಮಾ ಎಂದು ಮಾತನಾಡಿದ್ದಾರೆ. ಈ ವಿಷಯ ನನ್ನ ಗಮನಕ್ಕೆ ಬಂದಿದೆ. ನಾನೊಬ್ಬ ನಿರ್ಮಾಪಕನಾಗಿ ಗಾಂಧಿನಗರದಲ್ಲಿ ಯಾವ ನಿರ್ಮಾಪಕ ಯಾವ ಸಿನಿಮಾ ಮಾಡುತ್ತಾರೆ, ಸಿನಿಮಾ ಯಾವಾಗ ಬಿಡುಗಡೆ ಆಗಲಿದೆ ಕತೆ ಏನು ಎನ್ನುವುದು ಗೊತ್ತಾಗುತ್ತದೆ.
ಈಗ ಗಾಂಧಿನಗರಕ್ಕೆ ಹೊಸ ನಿರ್ಮಾಪಕರು ಬಂದಿದ್ದಾರೆ, ಅವರು ಒಂದು ಸಿನಿಮಾವನ್ನು ಬಿಡುಗಡೆ ಮಾಡಲಿದ್ದಾರೆ. ಅದು ಒಂದನೇ ತಾರೀಕಿನಂದು ಸಿನಿಮಾ ಬಿಡುಗಡೆ ಆಗಲಿದೆ, ಆ ಸಿನಿಮಾದ ನಿರ್ದೇಶಕ ನಿರ್ಮಾಪಕ ಎಲ್ಲರೂ ಈಗಾಗಲೇ ಚಿತ್ರಕಥೆಯನ್ನು ಸಿದ್ಧಪಡಿಸಿದ್ದಾರೆ. ಅದರ ಚಿತ್ರೀಕರಣ ತಾಲೀಮು ಎಲ್ಲವೂ ಮುಗಿದಾಗಿದೆ. ಆ ಸಿನಿಮಾವನ್ನು ಆರ್ಆರ್ ನಗರ ಕ್ಷೇತ್ರದಲ್ಲಿ ಬಿಡುಗಡೆ ಮಾಡಲಿದ್ದಾರೆ. ಇದು ಸೆಂಟಿಮೆಂಟ್ ಸಿನಿಮಾ ಆಗಿರಲಿದೆ. ಆ್ಯಕ್ಷನ್ ಸಿನಿಮಾ ಅವರಿಗೆ ವರ್ಕೌಟ್ ಆಗುತ್ತಿಲ್ಲ. ಹಾಗಾಗಿ ಸೆಂಟಿಮೆಂಟ್ ಸಿನಿಮಾ ಮಾಡಿದ್ದಾರೆ. ಆದಷ್ಟು ಬೇಗ ಈ ಸಿನಿಮಾವನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಡಿಕೆ ಬ್ರದರ್ಸ್ ವಿರುದ್ಧ ಮುನಿರತ್ನ ವ್ಯಂಗ್ಯವಾಡಿದ್ದಾರೆ.