ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಮ್ಮ ವಿರುದ್ಧ ನೀಡಿರುವ ಹೇಳಿಕೆಗೆ ಇಂದೂ ಸಹ ಸಂಸದೆ ಸುಮಲತಾ ಅಂಬರೀಶ್ ಆಕ್ರೋಶ ಹೊರಹಾಕಿದ್ದಾರೆ. ಬೆಂಗಳೂರಿನಲ್ಲಿ ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮತ್ತೊಮ್ಮೆ ಮಾಜಿ ಸಿಎಂ ಹೆಚ್ಡಿಕೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ನಿನ್ನೆ ಆಡಿದ ಮಾತು ಇಂದು ಹೇಳೇ ಇಲ್ಲ ಎಂದು ಹೇಳುವ ವ್ಯಕ್ತಿತ್ವ ಕುಮಾರಸ್ವಾಮಿ ಅವರದ್ದು. ಅವರ ಪ್ರತಿಯೊಂದು ಮಾತೂ ನಕಲಿಯೇ. ಅದಕ್ಕಾಗಿಯೇ ಮಂಡ್ಯ ಚುನಾವಣೆಯಲ್ಲಿ ನಾಲ್ವರು ನಕಲಿ ಸುಮಲತಾರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದರು. ನಾನು ಸಣ್ಣಪುಟ್ಟ ಬೆದರಿಕೆಗೆ ಹೆದರುವ ಗೌಡ್ತಿ ಅಲ್ಲ. ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಹೋರಾಡುತ್ತಿದ್ದೇನೆ, ಹೋರಾಟ ಮುಂದುವರಿಸುತ್ತೇನೆ. ಯಾರಿಗೂ ಹೆದರಲ್ಲ ಎಂದಿದ್ದಾರೆ.
ಮುಂದುವರೆದು, ಜೆಡಿಎಸ್ಗೆ ಸಂಸದ ಪ್ರಜ್ವಲ್ ರೇವಣ್ಣ ಒಬ್ಬರೇ ಆಶಾಕಿರಣ ಎಂದು ಹೇಳಿದ್ದಾರೆ. ಈ ಮೂಲಕ ತಮ್ಮ ವಿರುದ್ಧ ಸ್ಪರ್ಧಿಸಿ ಸೋತಿರುವ ಯುವ ಜೆಡಿಎಸ್ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗಲಿ, ಎರಡು ಸಾರಿ ಸಿಎಂ ಆಗಿ ಅಧಿಕಾರ ನಡೆಸಿದ ಕುಮಾರಸ್ವಾಮಿ ಆಗಲಿ, ಜೆಡಿಎಸ್ನಲ್ಲಿ ಪ್ರಬಲ ನಾಯಕರಲ್ಲ ಎಂದು ಹೇಳಿದರು.
ಸಣ್ಣ ವಯಸ್ಸಿನವರಾದರೂ ಪ್ರಜ್ವಲ್ ರೇವಣ್ಣ ಪ್ರಬುದ್ಧ ರಾಜಕಾರಣಿ. ಅವರನ್ನು ನೋಡಿ ಕಲಿಯುವುದು ಬಹಳಷ್ಟಿದೆ. ಕುಮಾರಸ್ವಾಮಿ ತಮ್ಮದೇ ಪಕ್ಷದವರಾಗಿರುವ ಪ್ರಜ್ವಲ್ ಅವರನ್ನು ನೋಡಿ ಕಲಿಯಲಿ. ಈಗ ಆ ಪಕ್ಷದಲ್ಲಿ ಅವರೊಬ್ಬರೇ ಆಶಾಕಿರಣ. ಹಿರಿಯರ ಮುಂದೆ ಹೇಗಿರಬೇಕು, ಸಂಸತ್ನಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ತಿಳಿದಿರುವ ಪ್ರಬುದ್ಧ ವ್ಯಕ್ತಿ ಆಗಿದ್ದಾರೆ. ಸಂಸತ್ನಲ್ಲಿ ತೂಕದ ಮಾತು ಆಡುವುದನ್ನು ನೋಡಿಯಾದರೂ ಕುಮಾರಸ್ವಾಮಿ ಕಲಿಯಲಿ ಎಂದಿದ್ದಾರೆ.
ನನ್ನನ್ನು ಬೆದರಿಸುವ ತಂತ್ರ ಮಾಡುವುದು ಬೇಡ. ನಾನು ಹೆದರಲ್ಲ. ಆಡಿಯೋ ಇದೆ, ವೀಡಿಯೋ ಇದೆ ಎಂದು ಹೇಳಿ ಬೆದರಿಸುವ ಹಳೆ ತಂತ್ರ ಬಿಡಲಿ. ನನ್ನ ಬಗ್ಗೆ ಯಾವುದೇ ದಾಖಲೆ ಇದ್ದರೂ ಬಿಡುಗಡೆ ಮಾಡಿ, ಕಾಯುತ್ತಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ: ಅವರು ಎಂಎಲ್ಎ ಆದ್ರೆ, ನಾನು ಎಂಪಿ: ಹೆಚ್ಡಿಕೆಗೆ ಸುಮಲತಾ ಟಾಂಗ್