ಬೆಂಗಳೂರು : ಗುತ್ತಿಗೆದಾರರು ಪ್ರಧಾನಿ ಅವರಿಗೆ ದೂರು ಕೊಡುವ ಮುನ್ನ ಕಾಂಗ್ರೆಸ್ ನಾಯಕರ ಮನೆಯಲ್ಲಿ ಡ್ರಾಫ್ಟ್ ಮಾಡಿದ್ದರು. ಈ ಬಗ್ಗೆ ತನಿಖೆಯಾದರೆ ಎಲ್ಲಾ ಬಹಿರಂಗ ಆಗುತ್ತದೆ, ಸತ್ಯಾಂಶ ಹೊರ ಬರುತ್ತದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಗಂಭೀರ ಆರೋಪ ಮಾಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, 40% ಕಮಿಷನ್ ಅಂತಾರಲ್ಲ, ಜಿಎಸ್ಟಿ ರಾಯಲ್ಟಿ ಸೇರಿದ್ರೆ 65% ಆಗುತ್ತದೆ. ಯಾರಾದರೂ ಗುತ್ತಿಗೆದಾರರು 35%ಗೆ ಕೆಲಸ ಮಾಡ್ತಾರಾ? ಎಂದ ಅವರು, ಆರೋಪ ಸಾಬೀತಾದ ಮೇಲೆ ಈಶ್ವರಪ್ಪನವರು ರಾಜೀನಾಮೆ ಕೊಡಬೇಕಷ್ಟೇ.. ಸಂತೋಷ ಪಾಟೀಲ್ ಜೊತೆಗೆ ಇನ್ನೂ ಇಬ್ಬರು ಹೋಗಿದ್ದರು, ಅವರು ಯಾರು? ಎಂದು ಇದೇ ವೇಳೆ ಪ್ರಶ್ನಿಸಿದರು.
ಇದನ್ನೂ ಓದಿ: '108 ಕಾಮಗಾರಿಗಳಿಗೆ ಮೌಖಿಕ ಆದೇಶ ಕೊಟ್ಟಿದ್ದೇ ಈಶ್ವರಪ್ಪ': ಹಿಂಡಲಗಾ ಗ್ರಾಪಂ ಅಧ್ಯಕ್ಷ
ಸಂತೋಷ ಸಾವಿನ ಬಗ್ಗೆ ಅನುಕಂಪ ಇದೆ, ಸಮಗ್ರ ತನಿಖೆ ಆಗಬೇಕು. ಸಂತೋಷ ಸ್ನೇಹಿತರು ಯಾಕೆ ಬೇರೆ ಬೇರೆ ರೂಂ ಮಾಡಿದ್ದರು?. ತನಿಖೆಯಾಗಿ ಸತ್ಯಾಂಶ ಹೊರ ಬಂದರೆ ರಾಷ್ಟ್ರೀಯ ನಾಯಕರು ನಿರ್ಧಾರ ಮಾಡುತ್ತಾರೆ ಎಂದು ಹೇಳಿದರು.
ರಾಜೀನಾಮೆಗೆ ಆಗ್ರಹ : ಇದೇ ವೇಳೆ ಜೆಡಿಎಸ್ನ ಉಪ ನಾಯಕ ಬಂಡೆಪ್ಪ ಕಾಶಂಪೂರ್ ಮಾತನಾಡಿ, ಸಚಿವ ಈಶ್ವರಪ್ಪನವರು ಯಾವುದೇ ತಡ ಮಾಡದೇ ರಾಜೀನಾಮೆ ಕೊಡಬೇಕು. ಎಲ್ಲದಕ್ಕಿಂತ ನೈತಿಕತೆ ದೊಡ್ಡದು. ಈಗ ರಾಜೀನಾಮೆ ಕೊಡಲಿ, ಆಮೇಲೆ ಆರೋಪದಿಂದ ಹೊರ ಬರಲಿ. ಅವರು ಹೇಳಿದರೂ, ಇವರು ಹೇಳಿದರು ಅಂತಾ ತಡ ಮಾಡಬೇಡಿ. ಆರೋಪಗಳು ಸುಮ್ಮನೆ ಎಲ್ಲರ ಮೇಲೂ ಬರಲ್ಲ. ಈಶ್ವರಪ್ಪ ರಾಜೀನಾಮೆ ಕೊಡುವುದೇ ಸೂಕ್ತ ಎಂದು ಅಭಿಪ್ರಾಯಪಟ್ಟರು.