ಬೆಂಗಳೂರು: 'ಅನ್ನಭಾಗ್ಯ' ಯೋಜನೆಯಡಿಯಲ್ಲಿ ಬಿಪಿಎಲ್ ಕಾರ್ಡ್‌ದಾರರಿಗೆ ವಿತರಿಸುವ ಅಕ್ಕಿಯನ್ನು ಕಡಿತಗೊಳಿಸಲು ಮುಂದಾಗಿರುವ ಸರ್ಕಾರದ ಯೋಜನೆಗೆ ರಾಜ್ಯಸಭೆ ಸದಸ್ಯ ಜಿ.ಸಿ. ಚಂದ್ರಶೇಖರ್ ಬೇಸರ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಆಹಾರ ಸಚಿವ ಕೆ. ಗೋಪಾಲಯ್ಯ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್ ಪತ್ರ ಬರೆದಿರುವ ಅವರು, ಈ ಮನವಿ ಮಾಡಿಕೊಂಡಿದ್ದು, ಕೊರೊನಾ ವೈರಸ್ ಎಂದಾಕ್ಷಣ ಜನರಲ್ಲಿ ಆಘಾತ ಆಗುವಂತೆ ಪರಿಸ್ಥಿತಿ ಜಾಗತಿಕ ಮಟ್ಟದಲ್ಲಿ ಸೃಷ್ಟಿಯಾಗಿದೆ. ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ತಲ್ಲಣ ಸೃಷ್ಟಿಯಾಗಿದೆ. ಸತತ ಲಾಕ್ ಡೌನ್ನಿಂದಾಗಿ ವ್ಯಾಪಾರ ವಹಿವಾಟುಗಳು ತೀವ್ರಗತಿಯ ಕುಸಿತ ಕಂಡಿದೆ. ಇನ್ನು ದಿನಗೂಲಿ ನೌಕರರು, ಆರ್ಥಿಕವಾಗಿ ಹಿಂದುಳಿದ ವರ್ಗಗಳ ಸಂಕಷ್ಟ ಹೇಳತೀರದು, ಆರ್ಥಿಕವಾಗಿ ಹಿಂದುಳಿದ ವರ್ಗಗಳು ನೆಮ್ಮದಿಯ ಜೀವನ ನಡೆಸಲು ಕನಿಷ್ಠ ಸೌಲಭ್ಯಗಳು ಆಹಾರ, ಆರೋಗ್ಯ ಇವುಗಳ ಭದ್ರತೆಯನ್ನು ನೋಡಿಕೊಳ್ಳುವ ಮಹತ್ತರ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದು ಹೇಳಿದ್ದಾರೆ.
![ಮನವಿ ಪತ್ರ](https://etvbharatimages.akamaized.net/etvbharat/prod-images/kn-bng-08-g-c-chandrashekar-letter-script-7208077_22062020231142_2206f_1592847702_802.jpg)
ರಾಜ್ಯ ಸರ್ಕಾರದ ಈ ಯೋಜನೆಯ ದೂರದರ್ಶಿತ್ವವನ್ನು ಅರಿಯದೆ ಕೇವಲ ಆರ್ಥಿಕ ಹೊರೆ ತಗ್ಗಿಸುವ ಸಲುವಾಗಿ 'ಅನ್ನಭಾಗ್ಯ' ಯೋಜನೆಯನ್ನು ನಿಧಾನವಾಗಿ ದುರ್ಬಲಗೊಳಿಸುತ್ತಿರುವುದು ಶ್ರೇಯಸ್ಕರವಲ್ಲ ಹಾಗೂ ಇದು ಪ್ರಸ್ತುತ ಸಮಯವೂ ಅಲ್ಲ. ದೇಶದ ಆಹಾರ ಭದ್ರತೆ ಹಾಗೂ ಪೂರೈಕೆ,ಶ್ರಮಿಕ ವರ್ಗಗಳ ಹಿತಾಸಕ್ತಿ, ರೈತರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ತಾವುಗಳು 'ಅನ್ನಭಾಗ್ಯ' ಯೋಜನೆಯನ್ನು ಯಥಾಪ್ರಕಾರ ಮೊದಲಿನಂತೆ ಉಳಿಸಿಕೊಂಡು ಸಾದ್ಯವಾದರೆ ಹೆಚ್ಚುವರಿಯಾಗಿ ತಲಾ 2 ಕೆ.ಜಿ ರಾಗಿ ಅಥವಾ ಜೋಳ ವಿತರಿಸುವುದರಿಂದ ಮಹಾಮಾರಿ ಕೊರೊನಾ ಸಂಕಷ್ಟದಲ್ಲಿರುವ ಸಮಯದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ನೈತಿಕ ಬೆಂಬಲ ನೀಡಿ ಜನಪರ ನಿಂತು ಅವರ ಹಿತ ಕಾಯಬೇಕಾದ ಕೋರುತ್ತೇನೆ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.