ಬೆಂಗಳೂರು : ಆಕಾಶದತ್ತ ಮುಖ ಮಾಡಿ ಕುಳಿತಿದ್ದ ರೈತರ ಮುಖದಲ್ಲೀದ ಸಂತಸ ಮೂಡಿದೆ. ನಿಧಾನವಾಗಿ ಮುಂಗಾರು ಚುರುಕುಗೊಳ್ಳುತ್ತಿದೆ. ರಾಜ್ಯದ ಹಲವೆಡೆ ಬಿರುಸಾಗಿ ಮಳೆಯಾಗುತ್ತಿದೆ. ಬಿಪೊರ್‌ಜಾಯ್ ಚಂಡಮಾರುತವು ತೇವಾಂಶ ಭರಿತಮೋಡಗಳನ್ನು ಸೆಳೆದುಕೊಂಡಿದ್ದು ದುರ್ಬಲಗೊಂಡಿದ್ದ ಮುಂಗಾರು ಮಾರುತಗಳು ಈಗ ರಾಜ್ಯಾದ್ಯಂತ ಆವರಿಸುತ್ತಿವೆ.
ಮಲೆನಾಡು, ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಮಾರುಗಳು ತುಸು ಪ್ರಬಲಗೊಂಡಿದ್ದು ಮೋಡ ಕವಿದ ವಾತಾವರಣದೊಂದಿಗೆ ಅಗಾಗ್ಗೆ ಮಳೆಯಾಗುತ್ತಿದೆ. ಅರಬ್ಬಿ ಸಮುದ್ರದಲ್ಲಿ ಮುಂಗಾರು ಇನ್ನಷ್ಟು ಮುನ್ನಡೆಯಲು ಪೂರಕ ವಾತಾವರಣ ಉಂಟಾಗಿರುವ ಹಿನ್ನೆಲೆಯಲ್ಲಿ ಉತ್ತರ ಒಳನಾಡಿಗೂ ಮಾರುತಗಳು ಪ್ರವೇಶಿಸಿವೆ. ಜೂನ್ 25ರಿಂದ ಈ ಭಾಗದಲ್ಲಿ ಜೋರಾಗಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ : ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಜೂನ್ 25ರಿಂದ ಮುಂದಿನ ಎರಡು ದಿನ ಭಾರಿ ಮಳೆಯಾಗಲಿದೆ. ಹೀಗಾಗಿ ಈ ಭಾಗಗಳಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ತಿಳಿಸಿದೆ. ಇದಲ್ಲದೆ, ಚಿತ್ರದುರ್ಗ, ಹಾಸನ, ಮಂಡ್ಯ, ತುಮಕೂರಿನಲ್ಲಿ ಜೂನ್ 22ರಂದು ಯೆಲ್ಲೋ ಅಲರ್ಟ್ ಇದೆ. ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಜೂನ್ 23ರಿಂದ ಸಾಧಾರಣ ಮಳೆ ಸುರಿಯಲಿದೆ ಎಂದು ಮಾಹಿತಿ ನೀಡಿದೆ.
ಇದನ್ನೂ ಓದಿ : ಕೈ ಕೊಟ್ಟ ಮಳೆ, ಭುವಿಯಲ್ಲೇ ಕರಗಿ ಹೋಗ್ತಿವೆ ಬಿತ್ತನೆ ಬೀಜಗಳು: ಚಿಕ್ಕಮಗಳೂರು ರೈತರ ಬವಣೆ
ಇಂದು ಎಲ್ಲೆಲ್ಲಿ ಮಳೆ?: ಇಂದು ಚಾಮರಾಜನಗರದ ಹರದನಹಳ್ಳಿ, ಚಿಕ್ಕಮಗಳೂರಿನ ಮೂಡಿಗೆರೆ, ಮಂಡ್ಯದ ಮಳವಳ್ಳಿ, ಮೈಸೂರಿನ ಸುತ್ತೂರು ಹಾಗೂ ತುಮಕೂರಿನ ಕೊನೆಹಳ್ಳಿ ಸೇರಿ ರಾಜ್ಯದ ಹಲವೆಡೆ ಮಳೆ ಸುರಿದಿದೆ. ಇದರಿಂದಾಗಿ ಮುಂಗಾರು ಕೃಷಿ ಚಟುವಟಿಕೆಗಳು ಶುರುವಾಗುವ ಎಲ್ಲ ಲಕ್ಷಣಗಳಿವೆ. ಆದರೆ ಒಂದೇ ಮಳೆ ನಂಬಿ ರೈತರು ಬಿತ್ತನೆ ಕಾರ್ಯ ಕೈಗೊಂಡರೆ ಬಿತ್ತನೆ ಕಾಳು ಮಣ್ಣು ಸೇರುವ ಸಂಭವವಿದೆ. ಮತ್ತೊಂದೆಡೆ ಈಗಾಗಲೇ ಮಳೆ ನಂಬಿ ಬಿತ್ತನೆ ಮಾಡಿದ ಬೀಜಗಳು ಭೂಮಿಯಲ್ಲಿ ಕರಗಿ ಹೋಗುತ್ತಿದ್ದವು. ಇತ್ತ ಮಳೆಯೂ ಇಲ್ಲ, ಅತ್ತ ಬೆಳೆಯೂ ಇಲ್ಲದಂತಾಗಿತ್ತು. ಸದ್ಯ ರಾಜ್ಯದ ಹಲವೆಡೆ ಮಳೆಯಾಗಿರುವುದು ರೈತರಿಗೆ ತುಸು ನೆಮ್ಮದಿ ಬಂದಂತಾಗಿದೆ.
ಐಐಟಿ ಅಧ್ಯಯನದಲ್ಲಿ ಹೇಳಿದ್ದೇನು? : ಭಾರತದಲ್ಲಿ 2023ರ ಮುಂಗಾರು ಸಾಮಾನ್ಯ ಮಟ್ಟದಲ್ಲಿರಲಿದೆ ಎಂದು ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ನೇತೃತ್ವದ ಅಂತಾರಾಷ್ಟ್ರೀಯ ಸಂಶೋಧಕರ ತಂಡವು ಅಭಿವೃದ್ಧಿಪಡಿಸಿದ ಹೊಸ ಯಂತ್ರ ಕಲಿಕೆ ಮಾದರಿಯ ಅಧ್ಯಯನದಲ್ಲಿ ತಿಳಿದು ಬಂದಿತ್ತು. ಮುಂಬರುವ ಮುಂಗಾರು ಋತುವಿನಲ್ಲಿ ಭಾರತದಾದ್ಯಂತ ಬೇಸಿಗೆ ಮುಂಗಾರು ಮಳೆ (AISMR) ಸುಮಾರು 790 ಮಿ.ಮೀ ಆಗಿರಲಿದೆ ಎಂದು ಈ ಅಧ್ಯಯನ ಹೇಳಿತ್ತು. ಅಂದರೆ ಸಾಮಾನ್ಯ ಮುಂಗಾರು ಇರಲಿದೆ ಎಂದರ್ಥ.
ಇದನ್ನೂ ಓದಿ : ಮುಂಗಾರು ಮಳೆ ಆರಂಭಕ್ಕೂ ಮುನ್ನವೇ ಕೊಡಗಿನಲ್ಲಿ ಬೀಡುಬಿಟ್ಟು NDRF ತಂಡ