ಬೆಂಗಳೂರು: ಕರ್ನಾಟಕಕ್ಕೆ ಶನಿವಾರ ಮುಂಗಾರು ಮಳೆಯ ಪ್ರವೇಶವಾಗಿದ್ದು, ಮುಂದಿನ ಐದು ದಿನ ಕರಾವಳಿಯ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂಗಾರು ಮಳೆಯ ಹಿನ್ನೆಲೆಯಲ್ಲಿ ಜೂನ್ 14ರವರೆಗೆ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಜೂನ್ 13ರ ವರೆಗೆ ಅರಬ್ಬಿ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದೆ.
ನೈರುತ್ಯ ಮುಂಗಾರು ಇನ್ನೆರಡು ದಿನಗಳಲ್ಲಿ ಬಹುತೇಕ ರಾಜ್ಯವನ್ನು ಅವರಿಸಲಿದೆ. ನಿನ್ನೆಯಿಂದ ಕರಾವಳಿಯಲ್ಲಿ ಮಳೆಯಾಗಿದೆ. ಮುಂದಿನ ಐದು ದಿನಗಳ ಕಾಲ ರಾಜ್ಯದಲ್ಲಿ ಮಳೆಯಾಗಲಿದೆ. 40-55 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಗುಡ್ಡಗಾಡು ಪ್ರದೇಶಗಳಲ್ಲಿ ಇಂದು ಮತ್ತು ನಾಳೆ ಸಾಧಾರಣ ಮಳೆಯಾಗಲಿದೆ ಎಂದು ಹೇಳಿದೆ.
ಸಿಲಿಕಾನ್ ಸಿಟಿಯಲ್ಲಿ ಮುಂದಿನ ಐದು ದಿನ ಮಳೆ : ಮುಂದಿನ ಐದು ದಿನಗಳಲ್ಲಿ ಬೆಂಗಳೂರು ನಗರದಲ್ಲಿ ಹಗುರ ಮತ್ತು ಸಾಧಾರಣ ಮಳೆಯಾಗಲಿದೆ. ಇಂದು ಸಂಜೆ ಕೂಡ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಂಡ್ಯದಲ್ಲಿ ವರುಣಾರ್ಭಟ : ವಾಡಿಕೆಯಂತೆ ಜೂನ್ ತಿಂಗಳ ಮೊದಲ ವಾರದಲ್ಲೇ ಆರಂಭವಾಗಬೇಕಿದ್ದ ಮುಂಗಾರು ಮಳೆ 10 ದಿನ ತಡವಾಗಿ ರಾಜ್ಯಕ್ಕೆ ಆಗಮಿಸಿದೆ. ಇದರ ಬೆನ್ನಲ್ಲೇ ಜೂನ್ 9ರಂದು ಮಂಡ್ಯದ ಕೆಲವು ತಾಲೂಕುಗಳಲ್ಲಿ ಅಪಾರ ಪ್ರಮಾಣದ ಮಳೆಯಾಗಿದೆ. ಧಾರಾಕಾರವಾಗಿ ಸುರಿದ ಮಳೆಗೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿ ಉಂಟಾಗಿದೆ.
ಜಿಲ್ಲೆಯ ಮದ್ದೂರು ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಶುಕ್ರವಾರ ಸಂಜೆ ಮಳೆಯಾಗಿತ್ತು. ನಿರಂತರವಾಗಿ ಸುರಿದ ಬಿರುಗಾಳಿ ಸಹಿತ ಮಳೆಗೆ ನಗರಕೆರೆ ಸೇರಿದಂತೆ ಹಲವು ಗ್ರಾಮಗಳಲ್ಲಿ 30ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮತ್ತು ಮರಗಳು ಧರಾಶಾಹಿಯಾಗಿದ್ದವು. ಇದರಿಂದಾಗಿ ನಗರಕೆರೆ, ಸೋಂಪುರ, ಮಾಲಗಾರನಹಳ್ಳಿ, ಅಜ್ಜಹಳ್ಳಿ, ಕ್ಯಾತಘಟ್ಟ, ಹುಲಿಗೆರೆಪುರ ಸೇರಿದಂತೆ 9 ಕ್ಕೂ ಹೆಚ್ಚು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಭಾರೀ ಮಳೆಯಿಂದಾಗಿ ಅಲ್ಲಲ್ಲಿ ವಾಹನ ಸಂಚಾರವೂ ಅಸ್ತವ್ಯಸ್ತಗೊಂಡಿತ್ತು.
ಮನೆಗಳಿಗೆ ಹಾನಿ: ಕೆಲವು ಗ್ರಾಮಗಳಲ್ಲಿ 30ಕ್ಕೂ ಹೆಚ್ಚು ಮನೆಗಳ ಹೆಂಚುಗಳು ಗಾಳಿಗೆ ತೂರಿ ಹೋಗಿ ಹಾನಿಗೊಳಗಾಗಿದ್ದವು. ಬೆಸಗರಹಳ್ಳಿ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳಲ್ಲಿ 15 ಕ್ಕೂ ಹೆಚ್ಚು ತೆಂಗಿನ ಮರ ಮತ್ತು ವಿದ್ಯುತ್ ಕಂಬಗಳು ಧರೆಗುರುಳಿತ್ತು. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತಗೊಂಡಿತ್ತು. ಬಳಿಕ ಸ್ಥಳಕ್ಕೆ ಆಗಮಿಸಿದ್ದ ಸೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ ರಸ್ತೆಗೆ ಬಿದ್ದಿದ್ದ ಕಂಬಗಳ ತೆರವು ಕಾರ್ಯಾಚರಣೆ ಮಾಡಿದ್ದರು.
ಮಂಗಳೂರಿಗೆ ತಂಪೆರೆದ ವರುಣ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೂನ್ 9ರಂದು ಭಾರಿ ಮಳೆಯಾಗಿತ್ತು. ಬಿಸಿಲಿನ ಧಗೆಗೆ ಕಂಗೆಟ್ಟಿದ್ದ ಜನರು ವರುಣನ ಆಗಮನದಿಂದ ನಿಟ್ಟುಸಿರುಬಿಟ್ಟಿದ್ದರು. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಉಂಟಾದ ಬಿಪರ್‌ಜಾಯ್ ಚಂಡಮಾರುತದ ಪರಿಣಾಮದಿಂದ ಕರಾವಳಿಯಲ್ಲಿ ಮಳೆಯಾಗಿತ್ತು.
ಇದನ್ನೂ ಓದಿ : Monsoon delay: ಮುಂಗಾರು ವಿಳಂಬ.. ಗಂಡು-ಹೆಣ್ಣಿನ ವೇಷದ ಗೊಂಬೆಗಳಿಗೆ ಶಾಸ್ತ್ರೋಕ್ತ ಮದುವೆ.. ಮಳೆಗಾಗಿ ದೇವರ ಮೊರೆ ಹೋದ ಜನ