ಬೆಂಗಳೂರು: ರೇಡಿಯೋ, ದೃಶ್ಯ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತುಗಳ ಮೇಲೆ ನಿಗಾವಹಿಸುವ ಸಲುವಾಗಿ 3 ಪಾಳಿಯಲ್ಲಿ ಸಿಬ್ಬಂದಿಯನ್ನು ನಿಯೋಜಿಸಿ, 24 ತಾಸೂ ಕೆಲಸ ಮಾಡಲಾಗುತ್ತಿದೆ ಎಂದು ಚುನಾವಣಾ ವಿಭಾಗದ ವಿಶೇಷ ಆಯುಕ್ತ ಉಜ್ವಲ್ ಕುಮಾರ್ ಘೋಷ್ ತಿಳಿಸಿದ್ದಾರೆ.
ಬೆಂಗಳೂರು ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಚುನಾವಣಾ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿರುವ ಉಜ್ವಲ್ ಕುಮಾರ್ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ರೇಡಿಯೋ, ದೃಶ್ಯ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ನೀಡಬೇಕಾದರೆ ಮಾಧ್ಯಮ ಪ್ರಮಾಣೀಕರಣ ಮತ್ತು ಪರಿಶೀಲನಾ ಸಮಿತಿಯಿಂದ ಪೂರ್ವಾನುಮತಿ ಪಡೆಯಬೇಕು. ಉಲ್ಲಂಘಿಸಿದರೆ ಸಂಭಂದಪಟ್ಟ ಅಭ್ಯರ್ಥಿಯ ಮೇಲೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದಿದ್ದಾರೆ.
ಮಾದರಿ ನೀತಿ ಸಂಹಿತೆ ಉಲ್ಲಂಘನೆಗಳ ಮೇಲೆ ನಿಗಾಹಿಸಲು ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದೆ. ದೃಶ್ಯ ಮಾಧ್ಯಮ, ರೇಡಿಯೋ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಜಾಹೀರಾತುಗಳ ಮೇಲೆ ನಿಗಾ ವಹಿಸಲು 3 ಪಾಳಿಯಲ್ಲಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪೂರ್ವಾನುಮತಿ ಪಡೆಯದ ಅಥವಾ ಪಾವತಿಸಿದ ಸುದ್ದಿಗಳು ಪ್ರಸಾರವಾದಲ್ಲಿ ಕೂಡಲೇ ಅದನ್ನು ಸಂಭಂದ ಪಟ್ಟ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗೆ ರವಾನಿಸಿ ಅದನ್ನು ಪರಿಶೀಲಿಸಿ ಶೀಘ್ರ ವರದಿ ನೀಡಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ನಗರದ 28 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸುಮಾರು 2.36 ಲಕ್ಷ ಮಂದಿ 80 ವರ್ಷ ಮೇಲ್ಪಟ್ಟ ಮತದಾರರಿದ್ದಾರೆ. ಈ ಸಂಭಂದ 80 ವರ್ಷ ಮೇಲ್ಪಟ್ಟವರಿಗೆ ಅಂಚೆ ಮತಪತ್ರದ ಮೂಲಕ ಮತ ಚಲಾಯಿಸಲು ಅವಕಾಶವಿದ್ದು, ನಾಮನಿರ್ದೇಶನಕ್ಕೂ ಮುಂಚಿತವಾಗಿ ಆಯಾ ವಿಧಾನಸಭಾ ಕ್ಷೇತ್ರದ ಚುನಾವಣಾಕಾರಿಗಳು ಮನೆಗೆ ತೆರಳಿ ಅಂಚೆ ಮತ ಹಾಕುವ ಬಗ್ಗೆ 12 ಡಿ ನಮೂನೆ ಮೂಲಕ ಮಾಹಿತಿ ಪಡೆದುಕೊಳ್ಳುತ್ತಾರೆ ಎಂದು ಮಾಹಿತಿ ನೀಡಿದ್ದಾರೆ. ಅದರಲ್ಲಿ ಮತಗಟ್ಟೆಗಳಿಗೆ ಬಂದು ಮತ ಚಲಾಯಿಸಲು ಇಚ್ಛಿಸುವವರು ಮತಗಟ್ಟೆಗಳಿಗೆ ಬಂದು ಮತಚಲಾಯಿಸಬಹುದಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಮಲ್ಲಿಕಾರ್ಜುನ ಖರ್ಗೆ ಸಿಎಂ ಆದರೆ ಅವರ ಜತೆ ಕೆಲಸ ಮಾಡಲು ನಾನು ಸಿದ್ಧ: ಡಿ.ಕೆ. ಶಿವಕುಮಾರ್