ಬೆಂಗಳೂರು: ನಗರದಲ್ಲಿ ಮಳೆಯಿಂದ ಮನೆಗಳಿಗೆ ಮತ್ತು ರಸ್ತೆಯಲ್ಲಿ ನೀರು ನುಗ್ಗಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ನಿವಾರಿಸಲು ಮುಂದಾಗಿರುವ ಬಿಬಿಎಂಪಿ ಅಧಿಕಾರಿಗಳು ಕಾಂಗ್ರೆಸ್ನ ಹಿರಿಯ ಶಾಸಕ ಹ್ಯಾರಿಸ್ ಅವರ ಪುತ್ರ ಮಹ್ಮದ್ ನಲಪಾಡ್ ಅವರಿಗೆ ಸೇರಿದ್ದೆನ್ನಲಾದ ನಲಪಾಡ್ ಅಕಾಡೆಮಿ ಒತ್ತುವರಿ ತೆರವು ಮಾಡಲು ಮುಂದಾದಾಗ ಸ್ಥಳದಲ್ಲಿ ಹೈಡ್ರಾಮವೇ ನಡೆದಿದೆ.
ಒತ್ತರಿಗೆ ಮುಂದಾಗಿದ್ದ ಬಿಬಿಎಂಪಿ ಅಧಿಕಾರಿಗಳಿಗೆ ನಲಪಾಡ್ ಅಕಾಡೆಮಿಯ ಸಿಬ್ಬಂದಿಗಳು ಅವಾಜ್ ಹಾಕಿದ್ದು, ನೋಟಿಸ್ ನೀಡದೆ ತೆರವಿಗೆ ಮುಂದಾಗಿದ್ದೀರಿ ಎಂದು ಪಾಲಿಕೆಯಿಂದ ನಡೆಸಲಾಗುತ್ತಿದ್ದ ಡೆಮಾಲಿಷನ್ ತಡೆಯುವುದಕ್ಕೆ ಮುಂದಾದರು. ರಾಜ ಕಾಲುವೆ ಒತ್ತುವರಿ ಮಾಡಿಕೊಂಡಿಲ್ಲ ಎಂಬುದಾಗಿ ಹೇಳಿ ದಾಖಲೆಗಳನ್ನು ನೀಡುವುದಾಗಿ ತಿಳಿಸಿದ್ದ ನಲಪಾಡ್, ಒತ್ತುವರಿ ತೆರವು ಮಾಡಿಲ್ಲ ಎನ್ನುವುದಕ್ಕೆ ಯಾವುದೇ ದಾಖಲೆಗಳನ್ನು ನೀಡಿರಲಿಲ್ಲ. ಜತೆಗೆ, ಸಿಬ್ಬಂದಿ ತೆರವು ಕಾರ್ಯಾಚರಣೆಗೆ ಅಡ್ಡಿ ಪಡಿಸಿದರು. ಆದರೂ ಬಿಬಿಎಂಪಿ ಅಧಿಕಾರಿಗಳು ಇದಕ್ಕೆ ಬಗ್ಗದೆ ಒತ್ತುವರಿಯನ್ನು ತೆರವು ಮಾಡಿದರು.
ನಲಪಾಡ್ ಅಕಾಡೆಮಿ ಸಿಬ್ಬಂದಿಯಿಂದ ಕಾರ್ಯಾಚರಣೆ ನಿಲ್ಲಿಸುವಂತೆ ಒತ್ತಡ ಹೇರಲಾಗಿತ್ತು. ಈ ವೇಳೆ ಬಿಬಿಎಂಪಿ ಅಧಿಕಾರಿಗಳು ಎರಡು ಬಾರಿ ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಿದ್ದರು. ಆದರೂ, ದಾಖಲೆಗಳನ್ನು ಒದಗಿಸಿದ ಹಿನ್ನೆಲೆ ತೆರವು ಕಾರ್ಯಾಚರಣೆ ಮುಂದುವರೆಯಿತು.
ಅಧಿಕಾರಿಗಳ ವಿರುದ್ಧ ತರಾಟೆ : ಜನರ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಆದರೆ, ಈವರೆಗೂ ಯಾವುದೇ ಸಮಸ್ಯೆ ಪರಿಹಾರ ಮಾಡಿಲ್ಲ. ಆದರೆ, ಒತ್ತುವರಿ ತೆರವು ಮಾಡುವುದಕ್ಕೆ ಮುಂದಾಗಿದ್ದೀರ ಎಂದು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದರು.
ದಾಖಲೆ ಕೊಡುವುದಾಗಿ ಹೇಳಿದ್ದ ನಲಪಾಡ್ : ಸೋಮವಾರ ನಲಪಾಡ್ ಬಂದಿದ್ದು, ಯಾವುದೇ ರೀತಿಯ ಒತ್ತುವರಿ ಮಾಡಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ನಮ್ಮ ಬಳಿ ದಾಖಲೆಗಳಿವೆ ಎಂದು ತಿಳಿಸಿದ್ದರು. ಆದರೆ, ನಲಪಾಡ್ ಅಕಾಡೆಮಿ ಇರುವ ಸ್ಥಳದಲ್ಲಿ ಕಾಲುವೆ ಇರುವುದಾಗಿ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ. ನಲಪಾಡ್ ಅವರು ಬೇರೊಂದು ದಾಖಲೆ ಕೊಡುವುದಾಗಿ ಹೇಳಿದ್ದಾರೆ. ಆದರೆ, ಈವರೆಗೂ ಯಾವುದೇ ದಾಖಲೆ ತಂದುಕೊಟ್ಟಿಲ್ಲ. ನಾವು ಅವರಿಗೆ ಕಾಯುವುದಕ್ಕೆ ಸಾಧ್ಯವಿಲ್ಲ, ಸಂಜೆಯ ಒಳಗಾಗಿ ಕಾರ್ಯಾಚರಣೆ ಮುಗಿಯಲಿದೆ ಎಂದು ಸ್ಥಳದಲ್ಲಿ ಹಾಜರಿದ್ದ ಬಿಬಿಎಂಪಿ ಕಾರ್ಯಪಾಲಕ ಎಂಜಿನಿಯರ್ ಮಾಲತಿ ತಿಳಿಸಿದ್ದಾರೆ.
ಸೋಮವಾರ ಸ್ಥಳಕ್ಕೆ ಭೇಟಿ ನೀಡಿದ್ದ ಕಾಂಗ್ರೆಸ್ ಮುಖಂಡ ನಲಪಾಡ್ ಪೊಲೀಸ್ ಅಧಿಕಾರಿಗಳ ವಿರುದ್ಧ ಒತ್ತುವರಿ ತೆರವು ವಿರುದ್ಧ ವಾಗ್ವಾದ ನಡೆಸಿದರು. ಸಂತ್ರಸ್ತರಿಗೆ ಸಹಾಯ ಮಾಡಲೂ ಸಹ ಅವಕಾಶ ನೀಡದಿರುವ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದರು.
ನೋಟಿಸ್ ನೀಡದೆ ಡೆಮಾಲಿಷ್ : ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ನೋಟಿಸ್ ನೀಡದೆ ಏಕಾಏಕಿ ತೆರವಿಗೆ ಮುಂದಾಗಿದ್ದೀರಿ. ಇದು ಕಾನೂನು ಬಾಹಿರ ಎಂದು ಸಾರ್ವಜನಿಕರು ಆರೋಪಿಸಿದರು. ಬಡವರ ಮನೆಗಳನ್ನು ಯಾವುದೇ ಮುಲಾಜಿಲ್ಲದೆ ತೆರವು ಮಾಡಲಾಗುತ್ತದೆ. ಆದರೆ, ಪ್ರಭಾವಿಗಳು ಮತ್ತು ರಾಜಕಾರಣಿಗಳ ಒತ್ತುವರಿ ತೆರವಿಗೆ ಮುಂದಾಗುವುದಿಲ್ಲ ಎಂದು ಆರೋಪಿಸಿದರು. ಅಲ್ಲದೆ, ಶೇಮ್ ಶೇಮ್ ಬಿಬಿಎಂಪಿ ಎಂದು ಘೋಷಣೆ ಕೂಗಿದರು.
ಇದನ್ನೂ ಓದಿ : ರಾಜಕಾಲುವೆ ಒತ್ತುವರಿದಾರರಿಗೆ ಶಾಕ್: ಮಹದೇವಪುರದಲ್ಲಿ ಜೆಸಿಬಿಗಳ ಘರ್ಜನೆ