ಬೆಂಗಳೂರು: ಕೊರೊನಾ ಸಂಬಂಧ ಪ್ರಧಾನಿ ಜೊತೆ ಸಿಎಂ ವಿಡಿಯೋ ಕಾನ್ಫರೆನ್ಸ್ ಪ್ರಾರಂಭವಾಗಿದ್ದು, ಇದೇ ಮೊದಲ ಬಾರಿ ಪ್ರಧಾನಿ ಮೋದಿ ಬಟ್ಟೆಯ ಮುಖಗವಸು ಹಾಕಿಕೊಂಡು ಸಂವಾದ ನಡೆಸುತ್ತಿದ್ದಾರೆ.
ಪಿಎಂ ಜೊತೆ ಸಂವಾದಕ್ಕೆ ಮುನ್ನ ಸಚಿವರ ಜೊತೆ ಸಭೆ:
ಸಂವಾದಕ್ಕೂ ಮುನ್ನ ಯಡಿಯೂರಪ್ಪ ಗೃಹ ಕಚೇರಿ ಕೃಷ್ಣಾದಲ್ಲಿ ಸಚಿವರ ಜೊತೆ ಪೂರ್ವಭಾವಿ ಸಭೆ ನಡೆಸಿದರು. ಈ ವೇಳೆ ಆರೋಗ್ಯ ಸಚಿವ ಶ್ರಿರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಸಚಿವ ಸುರೇಶ್ ಕುಮಾರ್, ಡಿಜಿಪಿ ಐಜಿಪಿ ಪ್ರವೀಣ್ ಸೂದ್, ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಈ ವೇಳೆ, ಲಾಕ್‌ಡೌನ್ ಮುಂದುವರಿಸುವುದು, ರಾಜ್ಯದಲ್ಲಿನ ಕೊರೊನಾ ಸ್ಥಿತಿಗತಿ ಬಗ್ಗೆ ಸಮಾಲೋಚನೆ ನಡೆಸಲಾಯಿತು. ಬಹುತೇಕ ಸಚಿವರು ಲಾಕ್‌ಡೌನ್ ಮುಂದುವರಿಸಲು ಸಹಮತ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಸೋಂಕು ಇರುವ ಪ್ರದೇಶದಲ್ಲಿ ಸೀಲ್ ಡೌನ್ ಮಾಡುವ ಬಗ್ಗೆನೂ ಅಧಿಕಾರಿಗಳು, ಸಚಿವರು ಸಲಹೆ ನೀಡಿದ್ದಾರೆ.
ಇನ್ನು ಲಾಕ್‌ಡೌನ್ ಕಟ್ಟುನಿಟ್ಟಿನ ಜಾರಿ ಬಗ್ಗೆಯೂ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಜೊತೆ ಮಾಹಿತಿ ಪಡೆದುಕೊಂಡರು. ಸೋಂಕು ಹಾಟ್ ಸ್ಪಾಟ್ ಜಿಲ್ಲೆಗಳಲ್ಲಿ ಲಾಕ್‌ಡೌನ್ ಮುಂದುವರಿಸುವ ಬಗ್ಗೆ ಅಭಿಪ್ರಾಯ ವ್ಯಕ್ತವಾಗಿದೆ.
ಜಿಲ್ಲೆಪೂರ್ತಿ ಲಾಕ್ ಡೌನ್ ಮಾಡುವ ಬದಲು ಪ್ರದೇಶವಾರು ಸೀಲ್ಡೌನ್ ಹೆಚ್ಚು ಪರಿಣಾಮಕಾರಿಯಾಗಿದೆ. ಉಳಿದೆಡೆ ವಹಿವಾಟಿಗೆ ನಿರ್ಬಂಧಿತ ಅವಕಾಶ ನೀಡುವ ಬಗ್ಗೆನೂ ಅಭಿಪ್ರಾಯ ವ್ಯಕ್ತವಾಯಿತು. ಈ ಎಲ್ಲ ವಿಚಾರಗಳನ್ನು ಸಿಎಂ ಅವರು ಪ್ರಧಾನಿ ಜೊತೆಗಿನ ವಿಡಿಯೋ ಕಾನ್ಫರೆನ್ಸ್ ವೇಳೆ ತಿಳಿಸಲಿದ್ದಾರೆ.