ಬೆಂಗಳೂರು : ಕರ್ನಾಟಕ ಸಾರಿಗೆ ಸಂಸ್ಥೆ ಬಸ್ಗಳಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಅಪಘಾತಗಳನ್ನು ತಪ್ಪಿಸಲು ನಾನಾ ಆವಿಷ್ಕಾರಗಳನ್ನ ಮಾಡಲಾಗ್ತಿದೆ. ಈಗ ಪ್ರಾಯೋಗಿಕ ಹಂತದಲ್ಲಿರುವ ಈ ಕ್ರಮಗಳು ಅನುಷ್ಠಾನಗೊಂಡ್ರೆ ಬಸ್ಗಳ ಎದುರು ಆಕಸ್ಮಿಕವಾಗಿ ಇತರ ವಾಹನಗಳು ಅಥವಾ ವ್ಯಕ್ತಿಗಳು ಅಡ್ಡ ಬಂದ್ರೆ ಚಾಲಕರಿಗೆ ಎಚ್ಚರಿಕೆಯ ಸೂಚನೆ ನೀಡುವ ಮತ್ತು ಸ್ವಯಂಚಾಲಿತವಾಗಿಯೇ ಬ್ರೇಕ್ ಹಾಕಿ ಅಪಘಾತ ತಪ್ಪಿಸಲು ಸಹಾಯವಾಗುತ್ತದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದರು.
ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಇಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಮಾತನಾಡಿದ ಅವರು, ಅಪಘಾತಗಳ ಪರಿಹಾರವಾಗಿ ರಾಜ್ಯದಲ್ಲಿ ಪ್ರತಿವರ್ಷ ಸುಮಾರು 100 ಕೋಟಿ ರೂಪಾಯಿಗಿಂತ ಹೆಚ್ಚು ಹಣ ನಮ್ಮ ಸಾರಿಗೆ ಸಂಸ್ಥೆಗಳಿಂದ ವ್ಯಯವಾಗುತ್ತಿದೆ. ಅಷ್ಟೇ ಅಲ್ಲ, ಅಪಘಾತಗಳಿಂದ ಅನೇಕ ಸಾವು-ನೋವುಗಳಾಗ್ತಿವೆ.
ಹಲವು ಸಂದರ್ಭಗಳಲ್ಲಿ ಇತರ ವಾಹನ ಚಾಲಕರು ನಡೆಸುವ ನಿರ್ಲಕ್ಷ್ಯದ ಚಾಲನೆಯಿಂದಾಗಿ ಉಂಟಾಗುವ ಅಪಘಾತಗಳಲ್ಲಿ ವಿನಾಕಾರಣ ನಮ್ಮ ಸಾರಿಗೆ ಸಂಸ್ಥೆಗಳು ಪರಿಹಾರ ನೀಡುವಂತಹ ಸಂದರ್ಭಗಳೂ ಎದುರಾಗಿವೆ. ಇವುಗಳನ್ನು ತಪ್ಪಿಸಲು ಅಪಘಾತಗಳ ಮುನ್ಸೂಚನೆ ನೀಡುವಂಥ ಉಪಕರಣಗಳನ್ನು ಬಸ್ಗಳಲ್ಲಿ ಅಳವಡಿಸಲು ಸೂಚಿಸಲಾಗಿತ್ತು. ಅದರಂತೆ ಕೆಲವು ಹೈಟೆಕ್ ಸಂಸ್ಥೆಗಳೊಂದಿಗೆ ನಮ್ಮ ಸಾರಿಗೆ ಅಧಿಕಾರಿಗಳು ಕಾರ್ಯನಿರತರಾಗಿದ್ದಾರೆ ಎಂದರು.
ಈಗಾಗಲೇ ಇಂತಹ ಉಪಕರಣಗಳನ್ನು ಅಭಿವೃದ್ಧಿಪಡಿಸಿದ ಸಂಸ್ಥೆಗಳ ಸಹಯೋಗದೊಂದಿಗೆ ಪ್ರಾಯೋಗಿಕವಾಗಿ ಈ ತಂತ್ರಜ್ಞಾನವನ್ನು ಶೀಘ್ರದಲ್ಲಿಯೇ ಪಡೆದುಕೊಳ್ಳಲು ಚಿಂತಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ಯಶಸ್ವಿಯಾದ್ರೆ ಅನುಕೂಲ, ಕೆಲವು ದುಬಾರಿ ಖಾಸಗಿ ಕಾರುಗಳಲ್ಲಿ ಇಂತಹ ತಂತ್ರಜ್ಞಾನ ಅಳವಡಿಸಿರುವುದರಿಂದ ರಾತ್ರಿ ವೇಳೆಯಲ್ಲಿ ಒಂದು ವೇಳೆ ಚಾಲಕರಿಗೆ ನಿದ್ದೆಯ ಮಂಪರು ಕವಿದಂತಾದ್ರೆ ತಕ್ಷಣವೇ ಎಚ್ಚರಿಕೆಯ ಸೂಚನೆ ನೀಡುವಂತಹ ಮತ್ತು ಆಕಸ್ಮಿಕವಾಗಿ ವಾಹನಗಳು ಅಥವಾ ವ್ಯಕ್ತಿಗಳು ಎದುರಿಗೆ ಅಡ್ಡ ಬಂದ್ರೆ ತಾನಾಗಿಯೇ ಬ್ರೇಕ್ ಹಾಕುವಂತಹ ವ್ಯವಸ್ಥೆ ಜಾರಿಗೆ ಬಂದಿದೆ. ಇಂತಹ ಆಧುನಿಕ ಪ್ರಯೋಗ ನಮ್ಮ ಸರ್ಕಾರಿ ಸಾರಿಗೆ ಬಸ್ಗಳಲ್ಲೂ ಯಶಸ್ವಿಯಾದ್ರೆ ಹಲವು ರೀತಿಯ ಅನುಕೂಲ ಸಾಧ್ಯವೆಂದು ತಿಳಿಸಿದರು.
ಲಾಕ್ಡೌನ್ ನಂತರದಲ್ಲಿ ಈಗಾಗಲೇ ಶೇ.60ರಷ್ಟು ಬಸ್ ಸಂಚಾರಗಳನ್ನು ಪ್ರಾರಂಭಿಸಲಾಗಿದೆ. ಮುಂದಿನ ತಿಂಗಳು ಕೋರಿಯರ್ ಸೇವೆಯನ್ನೂ ನಮ್ಮ ಸಾರಿಗೆ ಸಂಸ್ಥೆಗಳ ಮೂಲಕ ಪ್ರಾರಂಭಿಸಲಾಗುವುದು. ಈಗಾಗಲೇ ಸಾರಿಗೆ ಸಂಸ್ಥೆಗಳಲ್ಲಿ ಉಳಿತಾಯದ ಕ್ರಮವಾಗಿ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಲಾಗಿದೆ. ಹೊಸ ಸಿಬ್ಬಂದಿ ನೇಮಕವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ಸವದಿ ವಿವರಿಸಿದರು.
ಇಂದಿನ ಸಭೆಯಲ್ಲಿ ಸಾರಿಗೆ ಇಲಾಖೆಯ ಪ್ರ. ಕಾರ್ಯದರ್ಶಿ ಅಂಜುಂ ಪರ್ವೇಜ್, ಕರಾರಸಾ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಭದ್ರತಾ ಮತ್ತು ಜಾಗೃತ ನಿರ್ದೇಶಕರಾದ ಡಾ. ಅರುಣ್, ಈಕರಸಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೂರ್ಮಾರಾವ್, ವಾಕರಸಾ ಸಂಸ್ಥೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಶಾಂತ್ ಆಚಾರ್ ಭೇಟಿ : ಸಾರಿಗೆ ಸಂಸ್ಥೆಯ ಬಸ್ಗಳ ಪ್ರತಿಕೃತಿಗಳನ್ನು ರಚಿಸಿದ ಪ್ರಶಾಂತ್ ಆಚಾರ್ ಅವರು ಇಂದು ಬೆಂಗಳೂರಿನ ವಿಕಾಸಸೌಧ ಕಚೇರಿಯಲ್ಲಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರನ್ನು ಭೇಟಿಯಾಗಿ ಈ ಪ್ರತಿಕೃತಿಗಳನ್ನು ಹಸ್ತಾಂತರಿಸಿದರು.