ಬೆಂಗಳೂರು : ನಗರದ ಒತ್ತಡ ಜೀವನದಲ್ಲಿರುವವರಿಗೆ ಗ್ರಾಮೀಣ ಸಂಸ್ಕೃತಿ ಹಾಗೂ ರೈತರ ಬದುಕನ್ನು ಪರಿಚಯ ಮಾಡುವ ನಿಟ್ಟಿನಲ್ಲಿ ಸರ್ಕಾರ 'ಮಾದರಿ ಗ್ರಾಮ'ವನ್ನು ಅನಾವರಣಗೊಳಿಸಿದೆ.
ನಿನ್ನೆ ಲೋಕಾರ್ಪಣೆಗೊಂಡ ಮಾದರಿ ಗ್ರಾಮವು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಯ ಮಹಾತ್ಮಾ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಯ 13.24 ಕೋಟಿ ರೂ. ವೆಚ್ಚದಲ್ಲಿ ಜಕ್ಕಕ್ಕೂರಿನ ಶ್ರೀರಾಂಪುರದಲ್ಲಿ ನಿರ್ಮಿಸಲಾಗಿದೆ.
ಹಿಂದೆ ಹಳ್ಳಿಗಳಲ್ಲಿದ್ದ ವಿವಿಧ ವರ್ಗದವರ ಮನೆ, ಶಾಲೆ, ಪಂಚಾಯತ್ ಕಟ್ಟೆ, ನೀರು ಸೇದುವ ಬಾವಿ, ಯಕ್ಷಗಾನ ಹೀಗೆ ರಾಜ್ಯದ ಹಳ್ಳಿಗಳ ಬದುಕನ್ನು ಕಣ್ಣಿಗೆ ಕಟ್ಟಿಕೊಡುವ ಪ್ರಯತ್ನ ಇದಾಗಿದೆ.
ರಾಜ್ಯದ ಗ್ರಾಮಗಳಲ್ಲಿರುವ ಅಗಸಿ ಬಾಗಿಲು, ದನ ಕರು ಸಾಕಣೆ, ಹಳ್ಳಿ ವೈದ್ಯೆ, ಕಿರಾಣಿ ಅಂಗಡಿಗಳು ಇಲ್ಲಿವೆ. ಜೊತೆಗೆ ಒಕ್ಕಲಿಗ, ಸಿಂಪಿಗ, ಪತ್ತಾರ, ಬ್ರಾಹ್ಮಣ, ಶಾನುಭೋಗ, ಗೌಡ, ತೊಟ್ಟಿ ಮನೆ, ಮಾಳಿಗೆ ಮನೆ, ಶಾವಿಗೆ ಮಾಡುವವರ ಮನೆ, ಕುರುಬರ ಮನೆಗಳಿವೆ.
ಅಗಸ, ಶಿಲ್ಪಕಾರ, ಆಟಿಕೆ ನಿರ್ಮಿಸುವುವವರು, ಕುಂಬಾರ, ಬಳೆಗಾರ, ಮೀನುಗಾರ, ಬಡಗಿ ಮನೆ ಮಾದರಿಗಳಿವೆ. ಅಲ್ಲದೇ, ಕೊಡಗು ಮನೆ, ಶಾಲಿ ಗುಡಿ, ಸುಣಗಾರ ಬಟ್ಟೆ ನಿರ್ಮಾಣ, ಚಮ್ಮಾರರ ಮನೆ, ಚಕ್ಕಡಿ ಬಂಡಿ, ಗ್ರಾಮೀಣ ಮಕ್ಕಳ ಕ್ರೀಡೆ ಇತ್ಯಾದಿ ನೋಡಬಹುದಾಗಿದೆ.
ಬೇಸಾಯ ಪದ್ಧತಿಯಲ್ಲಿರುವ ಕುಂಟೆ, ಉಳುಮೆ, ಬಿತ್ತುವ ಸನ್ನಿವೇಶಗಳು ಸಹ ಇವೆ. ದನಗಳ ಸಂತೆ, ರೈತರ ಸಂತೆ, ದೇಸಿ ಕುಸ್ತಿ ಕಣ, ಕಣ ಸನ್ನಿವೇಶಗಳು ಇಲ್ಲಿವೆ. ಗ್ರಾಮೀಣ ಸಂಸ್ಕೃತಿಯ ಸ್ವಾವಲಂಬನೆಯ ಬದುಕಿನ ಪರಿಚಯವನ್ನು ಕಲಾ ರೂಪದಲ್ಲಿ ತೋರಿಸುವ ಪ್ರಯತ್ನ ಇದಾಗಿದೆ. ಇದು ರಾಜ್ಯದಲ್ಲಿ ಮೊದಲ ಪಾರಂಪರಿಕ ಗ್ರಾಮ ಎನಿಸಿಕೊಳ್ಳಲಿದ್ದು, ಪ್ರವಾಸಿ ತಾಣವಾಗಿಯೂ ಗುರುತಿಸಿಕೊಳ್ಳಲಿದೆ.