ಬೆಂಗಳೂರು : ಸಾ ರಾ ಮಹೇಶ್ನಂಥ ಕೊಚ್ಚೆಗೆ ಕಲ್ಲೆಸೆದು ನನ್ನ ಬಿಳಿ ಬಟ್ಟೆ ಕೊಳಕು ಮಾಡಿಕೊಳ್ಳುವುದಿಲ್ಲ ಎಂದು ವಿಧಾನಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಟಾಂಗ್ ಕೊಟ್ಟಿದ್ದಾರೆ.
ಸಾ ರಾ ಮಹೇಶ್ ಹೇಳಿಕೆಗೆ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ನಾನು ವಕೀಲನಾಗಿ ಕೆಲಸ ಮಾಡಿದ್ದೇನೆ, ತೀರ್ಪು ಓದದೆ ಕೆಲವು ಕಾನೂನು ತಜ್ಞರು ಮಾತನಾಡಿದ್ದಾರೆ. ನನ್ನ ನಾಮ ನಿರ್ದೇಶನ ಕಾನೂನು ಬದ್ಧವಾಗಿದೆ. ಅವರು ರಾಜ್ಯಪಾಲರಿಗೆ ಮಾತ್ರವಲ್ಲ ಯಾರಿಗೆ ಬೇಕಿದ್ದರೂ ಪತ್ರ ಬರೆಯಲಿ, ಅದಕ್ಕೂ ನನಗೂ ಸಂಬಂಧವಿಲ್ಲ. ಸರ್ಕಾರ ಅದನ್ನು ನೋಡಿಕೊಳ್ಳುತ್ತದೆ. ಕಾನೂನು ಮಂತ್ರಿ, ಕಾನೂನು ಕಾರ್ಯದರ್ಶಿಗಳು ಇರುತ್ತಾರೆ, ಇದರ ಬಗ್ಗೆ ಅವರಿಗೆ ಗೊತ್ತಿರಲಿಲ್ಲವಾ ಎಂದು ಪ್ರಶ್ನಿಸಿದರು.
ಎಸ್ ಎಲ್ ಭೈರಪ್ಪನಂತವರು ಇರುವಾಗ ವಿಶ್ವನಾಥ್ರನ್ನು ಆಯ್ಕೆ ಮಾಡಿದ್ದಾರೆ ಎಂಬ ಸಾ ರಾ ಮಹೇಶ್ ಹೇಳಿಕೆಗೆ ಪ್ರತಿಕ್ರಿಯಿಸಿ, ಎಸ್ ಎಲ್ ಬೈರಪ್ಪ ದೊಡ್ಡ ಸಾಹಿತಿ.. ಅವರಿಗೆ ಸರಸ್ವತಿ ಸಮ್ಮಾನ್ ಸಿಕ್ಕಿದೆ, ಸಾರಸ್ವತ ಲೋಕ ಅವರಲ್ಲಿ ತುಂಬಿದೆ. ಅಂದ ಹಾಗೆ, ನಾನೂ ಕೂಡ ಸಾಹಿತಿ, ರಾಜಕಾರಣಕ್ಕೆ ಸಂಬಂಧಿಸಿದಂತೆ 8 ಪುಸ್ತಕ ಬರೆದಿದ್ದೇನೆ ಎಂದರು.
ರಾಜತಾಂತ್ರಿಕ ವಿಷಯಗಳನ್ನು ಒಳಗೊಂಡಂತೆ ರಾಜಕಾರಣದ ಬಗ್ಗೆ ಸಾಕಷ್ಟು ಬರೆದಿದ್ದೇನೆ. ಹೀಗಾಗಿ ಸಾಹಿತ್ಯ ಕೋಟಾದಡಿ ನನಗೆ ಈ ಸ್ಥಾನ ಸಿಕ್ಕಿದೆ. ಏನೂ ತಿಳಿಯದೆ ನನ್ನನ್ನು ಆಯ್ಕೆ ಮಾಡುವುದಕ್ಕೆ ಸರ್ಕಾರ ಹಾಗೂ ಎಜಿ ದಡ್ಡರೆ ಎಂದು ಪ್ರಶ್ನಿಸಿದರು. ಸಾ ರಾ ಮಹೇಶ್‌ನೊಬ್ಬ ದೊಡ್ಡ ಸಂವಿಧಾನ ತಜ್ಞನಾ.. ಅಂತಾ ಕಿಡಿಕಾರಿದರು. ಸರ್ಕಾರದ ವಿರುದ್ಧ ಕೈ ನಾಯಕರ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಈ ಬಗ್ಗೆ ಈಗಾಗಲೇ ಸಚಿವರು ಉತ್ತರ ನೀಡಿದ್ದಾರೆ ಎಂದು ಹೇಳಿದರು.