ಬೆಂಗಳೂರು: ಶಾಸಕರಾದ ಮೇಲೆ ಮಂತ್ರಿಯಾಗಬೇಕೆನ್ನುವ ಬಯಕೆ ಇದ್ದೇ ಇರುತ್ತದೆ. ನಾನು ಪಕ್ಷದ ಅಧ್ಯಕ್ಷರ ಮುಂದೆ ನನ್ನ ಭಾವನೆ ವ್ಯಕ್ತಪಡಿಸಿದ್ದೇನೆ. ಈ ಬಾರಿ ಆಶೀರ್ವಾದ ಮಾಡುವ ವಿಶ್ವಾಸವಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತಮ್ಮ ಒಲವು ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಹಿಂದೆ ಸಚಿವನಾಗಿ ಕೆಲಸ ಮಾಡಿದ್ದೇನೆ. ಅವಕಾಶ ಕೊಟ್ಟರೆ ನಿಭಾಯಿಸಲು ಸಿದ್ದನಾಗಿದ್ದೇನೆ. ತಮ್ಮ ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಅಧ್ಯಕ್ಷರು ಏನು ಕ್ರಮ ಕೈಗೊಳ್ಳಬೇಕೊ ಅದನ್ನು ಮಾಡಿದ್ದಾರೆ. ಅವರು ಬಾಯಿ ಚಪಲಕ್ಕೆ ಮಾತನಾಡುತ್ತಿದ್ದಾರೆ. ಬಿಜೆಪಿಯಲ್ಲಿ ಒಂದು ವ್ಯವಸ್ಥೆ ಇದೆ. ಶಾಸಕಾಂಗ ಸಭೆಯಲ್ಲಿ ಮಾತನಾಡಬೇಕು. ನಾನು ನನ್ನ ಭಾವನೆಗಳನ್ನು ಶಾಸಕಾಂಗ ಸಭೆಯಲ್ಲಿ ಮಾತನಾಡಿದ್ದೇನೆ ಎಂದರು.
ಜಮೀರ್ ಅಹಮದ್ ಏನು ಎಂದು ಎಲ್ಲರಿಗೂ ಗೊತ್ತಿದೆ. ವಿಜಯೇಂದ್ರ ಪಕ್ಷದ ನಾಯಕರಾಗಿ ಕೆ.ಆರ್ ಪೇಟೆ ಮಾದರಿಯಲ್ಲಿ ಚುನಾವಣೆ ನಡೆಸಿದ್ದಾರೆ. ಜಮೀರ್ ತಾಕತ್ತಿದ್ದರೆ ಮುಂದಿನ ಚುನಾವಣೆಯಲ್ಲಿ ಚಾಮರಾಜಪೇಟೆಯಲ್ಲಿ ಜಯಗಳಿಸಿ ಬರಲಿ ನೋಡೊಣ ಎಂದು ಸವಾಲು ಹಾಕಿದರು.
ಎರಡೂ ಕ್ಷೇತ್ರದಲ್ಲಿ ಜಯಗಳಿಸುವ ವಿಶ್ವಾಸವಿದೆ. ಶಿರಾ ಅಭ್ಯರ್ಥಿ ವಿದ್ಯಾವಂತರಿದ್ದಾರೆ. ಶಾಶ್ವತ ನೀರಾವರಿ ಯೋಜನೆ ನೀಡುವ ಭರವಸೆ ಕೊಟ್ಟಿದ್ದಾರೆ. ಯಡಿಯೂರಪ್ಪ ಕೊಟ್ಟ ಮಾತಿನಂತೆ ನಡೆಯುವ ನಾಯಕ. ಮುನಿರತ್ನ ಅವರಿಗೆ ಇಂಥದ್ದೇ ಖಾತೆ ಕೊಡುತ್ತೇನೆ ಎಂದು ಸಿಎಂ ಹೇಳಿಲ್ಲ. ಮಂತ್ರಿಸ್ಥಾನ ಇದೆ ಎಂದು ಆಸೆ ಇಟ್ಕೊಂಡು ಕೂತರೆ ಆಗುವುದಿಲ್ಲ ಎಂದರು.
ವಿನಯ್ ಕುಲಕರ್ಣಿ ಅವರನ್ನು ಸಿಬಿಐ ವಶಕ್ಕೆ ಪಡೆದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ವಿನಯ ಕುಲಕರ್ಣಿ ಪಾತ್ರ ಇದೆ. ಅದಕ್ಕೆ ಸಿಬಿಐ ತನಿಖೆ ನಡೆಸುತ್ತಿದೆ. ಇದರಲ್ಲಿ ಬಿಜೆಪಿ ಪಾತ್ರ ಏನೂ ಇಲ್ಲ. ಸಿಬಿಐನ ದುರುಪಯೋಗ ಪಡಿಸಿಕೊಂಡಿರುವುದು ಕಾಂಗ್ರೆಸ್' ನಾವಲ್ಲ ಎಂದು ಹೇಳಿದರು.
ವಿಜಯೇಂದ್ರ ಬಸವಕಲ್ಯಾಣದಿಂದ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿದ ರೇಣುಕಾಚಾರ್ಯ, ಸ್ಪರ್ಧೆ ಮಾಡುವ ಬಗ್ಗೆ ವಿಜಯೇಂದ್ರ ಎಲ್ಲೂ ಹೇಳಿಲ್ಲ. ಯುವ ನಾಯಕರಾಗಿ ವಿಜಯೇಂದ್ರ ಬೆಳೆಯುತ್ತಿದ್ದಾರೆ. ಪಕ್ಷ ತೀರ್ಮಾನ ಮಾಡಿದರೆ ಸ್ಪರ್ಧೆ ಮಾಡಬಹುದು, ಹೇಳಕ್ಕಾಗಲ್ಲ. ಅವರು ಸ್ಪರ್ಧೆ ಮಾಡಿದರೆ ಗೆಲುವು ಖಚಿತ. ಅವರು ಸ್ಪರ್ಧೆ ಮಾಡಲಿ ಅಂತ ಹೇಳುವ ಅಧಿಕಾರ ನನಗೆ ಇಲ್ಲ. ಬಸವಕಲ್ಯಾಣದಿಂದ ಸ್ಪರ್ಧಿಸಿದರೆ ನೂರಕ್ಕೆ ನೂರು ಗೆಲ್ಲುತ್ತಾರೆ. ಆದರೆ ವಿಜಯೇಂದ್ರ ಹಾಗೂ ಸಿಎಂ ಯಡಿಯೂರಪ್ಪ ಅವರಿಗೆ ಆ ಮನಸ್ಸಿಲ್ಲ ಎಂದರು.