ಬೆಂಗಳೂರು: ಅನರ್ಹ ಶಾಸಕ ಆರ್.ಶಂಕರ್ ಬಿಜೆಪಿ ಸೇರಿದರೂ ಟಿಕೆಟ್ ದಕ್ಕಿಸಿಕೊಳ್ಳುವಲ್ಲಿ ವಿಫಲರಾಗಿದ್ದು, ಆತಂಕಕ್ಕೆ ಸಿಲುಕಿದ್ದಾರೆ. ಶಾಸಕ ಸ್ಥಾನವೂ ಇಲ್ಲದೆ, ಟಿಕೆಟ್ ಕೂಡ ಸಿಗದೆ ಅತಂತ್ರ ಸ್ಥಿತಿಗೆ ಸಿಲುಕುವ ಆತಂಕದಲ್ಲಿದ್ದಾರೆ. ಆದರೆ ಇವರನ್ನು ಎಂಎಲ್ಸಿ ಮಾಡುವ ಮೂಲಕ ಸಚಿವ ಸ್ಥಾನ ನೀಡಲಾಗುವುದು ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
15 ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆಗೆ 13 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದ್ದು, ಅದರಲ್ಲಿ ಶಂಕರ್ ಹೆಸರಿಲ್ಲ. 13 ಅನರ್ಹರಿಗೂ ಟಿಕೆಟ್ ನೀಡಿರುವ ಪಕ್ಷ, ತಮಗೆ ಟಿಕೆಟ್ ಪ್ರಕಟಿಸದೇ ಇರುವುದರಿಂದ ಶಂಕರ್ ಆತಂಕಕ್ಕೆ ಸಿಲುಕಿದ್ದಾರೆ.
ಅನರ್ಹ ಶಾಸಕ ಆರ್.ಶಂಕರ್ ಜೊತೆ ಸಚಿವ ಕೆ.ಎಸ್.ಈಶ್ವರಪ್ಪ ಪುತ್ರ ಕೆ.ಇ.ಕಾಂತೇಶ್ ಹೆಸರು ಕೇಳಿಬಂದಿತ್ತು. ಅದರ ಬೆನ್ನಲ್ಲೇ ಸಂಘ ಪರಿವಾರದ ಹಿನ್ನೆಲೆಯುಳ್ಳ ಪ್ರಕಾಶ್ ಬುರಡಿಕಟ್ಟಿ ಹೆಸರು ಚಾಲ್ತಿಗೆ ಬಂದಿದೆ. ಸಂಘ ಪರಿವಾರದ ನಾಯಕರ ಮೂಲಕ ಹೈಕಮಾಂಡ್ ಮಟ್ಟದಲ್ಲಿ ಲಾಬಿ ನಡೆಸ್ತಿರೋ ಪ್ರಕಾಶ್ ಬುರಡಿಕಟ್ಟಿ, ಸ್ಥಳೀಯ ಬಿಜೆಪಿ ನಾಯಕರ ಬೆಂಬಲ ಪಡೆಯಲು ಕಸರತ್ತು ನಡೆಸುತ್ತಿದ್ದಾರೆ. ಇಷ್ಟು ಸಾಲದು ಎನ್ನುವಂತೆ ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ಡಾ. ಬಸವರಾಜ್ ಕೆಲಗಾರ್ ಕೂಡ ರಾಣೆಬೆನ್ನೂರು ಟಿಕೆಟ್ ಆಕಾಂಕ್ಷಿಯಾಗಿದ್ದು, ಪಕ್ಷದ ಮೂವರು ಶಂಕರ್ಗೆ ತೀವ್ರ ಪೈಪೋಟಿ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಆತುರದ ನಿರ್ಧಾರ ಕೈಗೊಂಡು ಪಕ್ಷದಲ್ಲಿ ಅಸಮಾಧಾನ ಭುಗಿಲೇಳಲು ಅವಕಾಶ ಕಲ್ಪಿಸಬಾರದು ಎನ್ನುವ ಕಾರಣಕ್ಕೆ ಮೊದಲ ಪಟ್ಟಿಯಲ್ಲಿ ರಾಣೆಬೆನ್ನೂರು ಕ್ಷೇತ್ರದ ಅಭ್ಯರ್ಥಿ ಹೆಸರು ಪ್ರಕಟಿಸದಿರಲು ನಿರ್ಧರಿಸಲಾಯಿತು ಎಂದು ತಿಳಿದುಬಂದಿದೆ.
ಈ ನಡುವೆ ರಾಣೆಬೆನ್ನೂರು ಟಿಕೆಟ್ ಕೆ.ಇ.ಕಾಂತೇಶ್ಗೆ ಕೊಡಿ ಎಂದು ಹಾವೇರಿ ಜಿಲ್ಲಾಧ್ಯಕ್ಷ ಶಿವರಾಜ್ ಸಜ್ಜನ್ಗೆ ಪತ್ರ ಬರೆದ ಕಾಂತೇಶ್ ಬೆಂಬಲಿಗರು, ಟಿಕೆಟ್ ನೀಡಲು ಮನವಿ ಮಾಡಿದ್ದಾರೆ. ಶಿವಾಜಿನಗರ ಕ್ಷೇತ್ರದಿಂದ ಅನರ್ಹ ಶಾಸಕ ರೋಷನ್ ಬೇಗ್ ಅಥವಾ ಪುತ್ರ ರುಮಾನ್ ಬೇಗ್ಗೆ ಟಿಕೆಟ್ ಬೇಡಿಕೆ ಇಡಲಾಗಿದೆ. ಆದರೆ ಐಎಂಎ ಹಗರಣದ ಪರಿಣಾಮ ರಾಷ್ಟ್ರಮಟ್ಟದಲ್ಲಿ ಮುಜುಗರಕ್ಕೀಡಾಗಬಹುದು ಎನ್ನುವ ಆತಂಕದಿಂದ ಬೇಗ್ ಕುಟುಂಬದಿಂದ ಬಿಜೆಪಿ ಅಂತರ ಕಾಯ್ದುಕೊಂಡಿದೆ ಎನ್ನಲಾಗುತ್ತಿದೆ.
ಮಾಜಿ ಶಾಸಕ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಟಿಕೆಟ್ ಆಕಾಂಕ್ಷಿಯಾಗಿದ್ದು, ಮಾಜಿ ಕಾರ್ಪೋರೇಟರ್ ಶರವಣ ಹೆಸರು ಕೂಡ ನಿನ್ನೆಯಿಂದ ಚಾಲ್ತಿಗೆ ಬಂದಿದೆ. ಕೊನೆಯಲ್ಲಿ ಶರವಣಗೂ ಕೂಡಾ ಶಿವಾಜಿನಗರದಿಂದ ಬಿಜೆಪಿ ಟಿಕೆಟ್ ಘೋಷಣೆ ಮಾಡಿದೆ ಎಂದು ತಿಳಿದು ಬಂದಿದೆ.