ಬೆಂಗಳೂರು: ವಿಶ್ವಾಸ ಮತ ಸಾಬೀತುಪಡಿಸುವ ಆತ್ಮವಿಶ್ವಾಸದಲ್ಲಿರುವ ಬಿಜೆಪಿಗೆ ಜಗಳೂರು ಶಾಸಕ ಅನಾರೋಗ್ಯದಿಂದ ಆಸ್ಪತ್ರೆ ಸೇರಿರುವುದು ಸ್ವಲ್ಪಮಟ್ಟಿಗೆ ಆತಂಕ ಸೃಷ್ಟಿಸಿದೆ. ದಾವಣಗೆರೆ ಜಿಲ್ಲೆ ಜಗಳೂರು ಕ್ಷೇತ್ರದ ಬಿಜೆಪಿ ಶಾಸಕ ಎಸ್.ವಿ. ರಾಮಚಂದ್ರ ಅನಾರೋಗ್ಯದಿಂದ ಬಳಲುತ್ತಿದ್ದು, ನಗರದ ಸ್ಪರ್ಶ ಆಸ್ಪತ್ರೆಗೆ ದಾಖಲಾಗಿದ್ದಾರೆ.
ವಿಶ್ವಾಸಮತ ಯಾಚನೆ ಹಿನ್ನೆಲೆ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದ ಬಿಜೆಪಿ ಶಾಸಕರ ತಂಡದ ಜೊತೆಯಲ್ಲಿಯೇ ಇದ್ದ ರಾಮಚಂದ್ರ, ಜುಲೈ 23 ರಂದು ವಿಶ್ವಾಸಮತ ಯಾಚನೆಗೂ ಮುನ್ನವೇ ಅನಾರೋಗ್ಯ ಪೀಡಿತರಾಗಿದ್ದರು. ಆದರೂ, ಮೈತ್ರಿ ಸರ್ಕಾರದ ವಿಶ್ವಾಸಮತ ಯಾಚನೆ ವೇಳೆ ಸದನಕ್ಕೆ ಹಾಜರಾಗಿದ್ದರು.
ಮೈತ್ರಿ ಸರ್ಕಾರಕ್ಕೆ ವಿಶ್ವಾಸಮತದಲ್ಲಿ ಸೋಲುಂಟಾದ ಬಳಿಕ ರೆಮಡಾ ರೆಸಾರ್ಟ್ಗೆ ತೆರಳಿ ನಂತರ ಸ್ಪರ್ಶ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜ್ವರ,ಬಿಪಿ ಶುಗರ್,ಕಾಲು ಬೇನೆಗೆ ತುತ್ತಾಗಿದ್ದು, ಶಾಸಕರು ಚೇತರಿಸಿಕೊಳ್ಳಲಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.