ಬೆಂಗಳೂರು: ಡಾ. ಬಾಬು ಜಗಜೀವನ್ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ (ಲಿಡ್ಕರ್) ಅಧ್ಯಕ್ಷರಾಗಿ ಇಂದು ಅಧಿಕಾರ ಸ್ವೀಕರಿಸಿದ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಶಾಸಕ ಪ್ರೊ. ಎನ್ ಲಿಂಗಣ್ಣ ಇಂದು ಪ್ರಥಮ ಪತ್ರಿಕಾಗೋಷ್ಠಿ ನಡೆಸಿದರು.
ಈ ನಿಗಮದ ಆರ್ಥಿಕ ಸದೃಢತೆಗಾಗಿ ಮತ್ತು ಪರಿಶಿಷ್ಟ ಜಾತಿಯ ಚರ್ಮ ಕುಶಲ ಕರ್ಮಿಗಳ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಪ್ರಾಮಾಣಿಕವಾಗಿ ಮತ್ತು ನಿಸ್ವಾರ್ಥದಿಂದ ಶ್ರಮಿಸುವುದಾಗಿ ಇಚ್ಛಿಸುತ್ತೇನೆ ಎಂದರು. ನಿಗಮವನ್ನು 1976 ರಲ್ಲಿ ರಾಜ್ಯ ಸರ್ಕಾರ ಸ್ಥಾಪಿಸಿರುತ್ತದೆ ನಿಗಮವು ಸಮಾಜ ಕಲ್ಯಾಣ ಇಲಾಖೆಯ ಆಡಳಿತ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಪರಿಶಿಷ್ಟ ಜಾತಿಯಡಿ ಬರುವ ಮಾದಿಗ, ಸಮಗಾರ, ಡೋರ, ಮಚಗಾರ, ಮೋಚಿ ಮತ್ತಿತರ ಸಮುದಾಯಗಳಿಗೆ ಸೇರಿದ ಪಾರಂಪರಿಕ ಚರ್ಮಗಾರಿಕೆ ವೃತ್ತಿ ಮಾಡುತ್ತಿರುವ ಕುಟುಂಬಗಳ ಸರ್ವತೋಮುಖ ಅಭಿವೃದ್ಧಿ ಉದ್ದೇಶದಿಂದ, ಹಲವು ಯೋಜನೆಗಳನ್ನು ಹಮ್ಮಿಕೊಂಡು ಅನುಷ್ಠಾನ ಗೊಳಿಸುತ್ತೇನೆ ಎಂದರು. ಪ್ರಸ್ತುತ ಸಾಲಿನಲ್ಲಿ 2,340 ಕುಶಲಕರ್ಮಿಗಳಿಗೆ ರೂ. 1,837.50 ಲಕ್ಷಗಳ ವೆಚ್ಚದಲ್ಲಿ ವಿವಿಧ ಯೋಜನೆಯಡಿ ಸ್ವಯಂ ಉದ್ಯೋಗ ಕಲ್ಪಿಸಲಾಗುವುದು ಎಂದು ತಿಳಿಸಿದರು.
18,000 ಕ್ಕಿಂತ ಹೆಚ್ಚು ಕುಶಲಕರ್ಮಿಗಳಿಗೆ ಪಾದರಕ್ಷೆ ಮತ್ತು ಚರ್ಮ ವಸ್ತುಗಳ ತಯಾರಿಕೆಯಲ್ಲಿ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡಲಾಗಿದ್ದು, ಪ್ರಸ್ತುತ ಸಾಲಿನಲ್ಲಿ 750 ಕುಶಲಕರ್ಮಿಗಳಿಗೆ ರೂ. 275.58 ಲಕ್ಷದ ವೆಚ್ಚದಲ್ಲಿ ತರಬೇತಿ ನೀಡಲಾಗುತ್ತದೆ ಎಂದರು. ಒಟ್ಟು 5.89 ಕೋಟಿಗಳನ್ನು ಕೋವಿಡ್-19 ಲಾಕ್ ಡೌನ್ ಪ್ರಯುಕ್ತ ಸಂಕಷ್ಟಕ್ಕೆ ಒಳಗಾದ ಚರ್ಮ ಕುಶಲಕರ್ಮಿಗಳಿಗೆ ಒಂದು ಬಾರಿ ಪರಿಹಾರ 5000/- ದಂತೆ 11,772 ಚರ್ಮ ಕುಶಲಕರ್ಮಿಗಳಿಗೆ ವಿತರಿಸಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಚರ್ಮಾಭಿವೃದ್ಧಿ ನಿಗಮಕ್ಕೆ ಹರಳಯ್ಯ ಸಮುದಾಯದವರನ್ನು ಅಧ್ಯಕ್ಷರನ್ನಾಗಿಸಲು ಆಗ್ರಹ