ಬೆಂಗಳೂರು : ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಯ 3 ವಲಯಗಳಲ್ಲಿ 2089.50 ಕೋಟಿ ರೂ. ಬಾಕಿ ಇದೆ. ತಕ್ಷಣವೇ ಇದನ್ನ ಬಿಡುಗಡೆ ಮಾಡಬೇಕೆಂದು ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ ವಿಧಾನಸಭೆಯಲ್ಲಿ ಇಂದು ಒತ್ತಾಯಿಸಿದರು.
ನಿಲುವಳಿ ಸೂಚನೆ ಪೂರ್ವ ಭಾವಿ ಪ್ರಸ್ತಾಪ ಮಾಡಿದ ಅವರು, ಗುತ್ತಿಗೆದಾರರಿಗೆ ಈ ಮೊತ್ತದ ಹಣವನ್ನು ತಕ್ಷಣವೇ ಬಿಡುಗಡೆ ಮಾಡಬೇಕು. ಅಲ್ಲದೆ, ಕಾವೇರಿ ನೀರಾವರಿ ನಿಗಮ ವ್ಯಾಪ್ತಿಯಲ್ಲಿ 578.25 ಕೋಟಿ ರೂ. ಭೂ ಪರಿಹಾರ ಬಾಕಿ ಇದೆ. ತಕ್ಷಣವೇ ರೈತರಿಗೆ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.
ಮೈತ್ರಿ ಸರ್ಕಾರದ ಅವಧಿಯಲ್ಲಿ ಒಪ್ಪಿಗೆ ಪಡೆಯಲಾಗಿದ್ದ ಕಾವೇರಿ ಕೊಳ್ಳದ ಕಾಮಗಾರಿಗಳನ್ನು ನಿಲ್ಲಿಸಿದ್ದಾರೆ. ವಿವಿಧ ಅಭಿವೃದ್ಧಿ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಕಾರ್ಯಾದೇಶ ನೀಡಿದ್ದರೂ ಕೂಡ ಆರ್ಥಿಕ ಇಲಾಖೆ ನಿರ್ದೇಶನದಂತೆ ತಡೆಹಿಡಿಯಲಾಗಿದೆ.
ಈ ವಿಚಾರದ ಬಗ್ಗೆ ವಿಸ್ತೃತವಾಗಿ ಚರ್ಚೆ ಮಾಡಲು ಅವಕಾಶ ನೀಡುವಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಲ್ಲಿ ಮನವಿ ಮಾಡಿದ್ದರು. ಈ ವಿಚಾರವನ್ನು ನಿಲುವಳಿ ಸೂಚನೆಯ ಬದಲಾಗಿ ನಿಯಮ 69ರ ಅಡಿ ಚರ್ಚೆಗೆ ಅವಕಾಶ ಕೊಡುವುದಾಗಿ ಸಭಾಧ್ಯಕ್ಷರು ಪ್ರಕಟಿಸಿದರು.