ಮಹದೇವಪುರ(ಬೆಂಗಳೂರು): ಕ್ಷೇತ್ರದ ಪ್ರಮುಖ ರಸ್ತೆಗಳ ಗುಣಮಟ್ಟ ಮತ್ತು ಸ್ಥಿತಿ ಗತಿಗಳ ಪರಿಶೀಲನೆ ನಡೆಸುವ ಸಲುವಾಗಿ ಕ್ಲೀನ್ ಸ್ಟ್ರೀಟ್ 75 ಕಿಲೋಮೀಟರ್ ಚಾಲೆಂಜ್ನ ಅಂಗವಾಗಿ ದ್ವಿಚಕ್ರ ವಾಹನದಲ್ಲಿ ಶಾಸಕ ಅರವಿಂದ ಲಿಂಬಾವಳಿ ರಸ್ತೆಗಿಳಿದು ಅಧಿಕಾರಿಗಳ ಜೊತೆ ಪರಿಶೀಲನೆ ನಡೆಸಿದರು. ನಿನ್ನೆ ಸುಮಾರು 35 ಕಿಲೋ ಮೀಟರ್ ದೂರ ತೆರಳಿ ಪರಿಶೀಲನೆ ನಡೆಸಿದರು.
ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕ್ಷೇತ್ರದ ಪ್ರಮುಖ ರಸ್ತೆಗಳ ಗುಣಮಟ್ಟ ಸ್ಥಿತಿಗತಿಯನ್ನು ಪರಿಶೀಲಿಸುವ ಉದ್ದೇಶದಿಂದ ಕ್ಲೀನ್ ಸ್ಟ್ರೀಟ್ ಎಂಬ ಕಾರ್ಯಕ್ರಮಕ್ಕೆ ಮಹದೇವಪುರದ ಕಾಡುಬೀಸನಹಳ್ಳಿ ಕೆಳಸೇತುವೆ ಬಳಿ ಚಾಲನೆ ನೀಡಲಾಗಿದೆ. ಈ ಮೂಲಕ ಕ್ಷೇತ್ರದ 75 ಕಿಲೋ ಮೀಟರ್ ರಸ್ತೆಗಳ ಪರಿಶೀಲನೆಗೆ ಅಧಿಕಾರಿಗಳೊಡನೆ ಮತ್ತು ಕ್ಷೇತ್ರದ ಕಾರ್ಯಕರ್ತರ ಜೊತೆ ದ್ವಿಚಕ್ರ ವಾಹನದಲ್ಲಿ ತೆರಳಿ ಪಾರದರ್ಶಕವಾಗಿ ಸಮಸ್ಯೆಗಳನ್ನು ಆಲಿಸಲಾಗುತ್ತಿದೆ. ಕ್ಷೇತ್ರದ ಕಾಡುಬೀಸನಹಳ್ಳಿ ಅಂಡರ್ ಪಾಸ್ನಿಂದ ಆರಂಭಗೊಂಡ ಪರಿಶೀಲನಾ ರ್‍ಯಾಲಿ ಪಣತ್ತೂರು ಜಂಕ್ಷನ್ ವರೆಗೂ ಸಾಗಿ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳ ಕುರಿತು ತಿಳಿದುಕೊಳ್ಳಲಾಯಿತು ಎಂದು ಹೇಳಿದರು.
ಜನರು ಸಂಚರಿಸುವ ಪಾದಚಾರಿ ಮಾರ್ಗಗಳಲ್ಲಿ ಅನಧಿಕೃತವಾಗಿ ಅಂಗಡಿ ಮುಂಗಟ್ಟುಗಳು, ಮಾರ್ಕೆಟ್ ಸ್ಟಾಲ್‌ಗಳನ್ನು ಒತ್ತುವರಿ ಮಾಡಿದ್ದು ಗಮನಕ್ಕೆ ಬಂದಿದೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ರಸ್ತೆಯ ಸುತ್ತಮುತ್ತಲಿನ ಪ್ರದೇಶಗಳನ್ನ ವೀಕ್ಷಿಸಲಾಗಿದೆ, ಮುಂದಿನ ದಿನಗಳಲ್ಲಿ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುವುದು ಎಂದರು.
ಬೆಂಗಳೂರಿನ ಮೂಲ ಸೌಕರ್ಯಗಳ ಬಗ್ಗೆ ಮೊಹನ್ ದಾಸ್ ಪೈ ಟ್ವೀಟ್ ಮಾಡಿರುವ ಬಗ್ಗೆ ಮಾತನಾಡಿದ ಶಾಸಕ ಲಿಂಬಾವಳಿ, ಬೆಂಗಳೂರು ಅತೀ ವೇಗವಾಗಿ ಬೆಳೆಯುತ್ತಿರುವ ನಗರ. ಮಹದೇವಪುರ ನೂರಾರು ಕಂಪನಿಗಳಿರುವ ಕ್ಷೇತ್ರ. ಇಲ್ಲಿ ಮೂಲಭೂತ ಸೌಕರ್ಯಗಳನ್ನ ಕಲ್ಪಿಸುವ ಉದ್ದೇಶದಿಂದ ಬೆಸ್ಕಾಂ, ಜಲಮಂಡಳಿ, ಇಂಟರ್ನೆಟ್ ಕಂಪನಿಗಳು ರಸ್ತೆಗಳನ್ನ ಅಗೆದಿದ್ದು, ಮುಂದಿನ ಎರಡು ಮೂರು ವರ್ಷಗಳಲ್ಲಿ ಬೆಂಗಳೂರಿನ ರಸ್ತೆಗಳು ಉತ್ತಮ ಗುಣಮಟ್ಟವನ್ನ ಕಾಯ್ದುಕೊಳ್ಳಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಂಟಿ ಆಯುಕ್ತ ವೆಂಕಟಚಲಪತಿ, ನಗರ ಮಂಡಲ ಅಧ್ಯಕ್ಷ ಮನೋಹರರೆಡ್ಡಿ, ಜಯಕುಮಾರ್, ಮುಖಂಡರಾದ ರಾಜರೆಡ್ಡಿ, ಜಯಚಂದ್ರರೆಡ್ಡಿ, ವೆಂಕಟಸ್ವಾಮಿ ರೆಡ್ಡಿ, ವರ್ತೂರು ಶ್ರೀಧರ್, ಎಲ್.ರಾಜೇಶ್, ನಲ್ಲೂರಹಳ್ಳಿ ಚಂದ್ರಶೇಖರ ರೆಡ್ಡಿ ಅಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ಇದನ್ನೂ ಓದಿ: ನಮಗೆ ಸ್ವಂತ ಮನೆ, ರೇಷನ್ ಕಾರ್ಡ್, ಆಧಾರ್ ಕಾರ್ಡ್ ಯಾವುದೂ ಇಲ್ಲ: ಸಚಿವ ಕತ್ತಿ ಮುಂದೆ ಕಣ್ಣೀರಿಟ್ಟ ಮಹಿಳೆ