ಬೆಂಗಳೂರು : ಶಾಸಕ ಆನಂದ್ ಸಿಂಗ್ ಅವರ ಮೇಲೆ ಹಲ್ಲೆ ಪ್ರಕರಣ ಸಂಬಂಧ ಜೈಲು ಪಾಲಾಗಿರುವ ಕಂಪ್ಲಿ ಶಾಸಕ ಗಣೇಶ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು
ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ.
ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ಪ್ರಕಟಿಸಿದ ನ್ಯಾಯಧೀಶ ರಾಮಚಂದ್ರ ಡಿ. ಹುದ್ದರ್ ಅವರು ವಜಾಗೊಳಿಸಿದರು. ಆ ಮೂಲಕ ಶಾಸಕ ಗಣೇಶ್ ಗೆ ಜೈಲೆ ಗತಿಯಾಗಿದೆ.
ಜನವರಿ 21 ರಂದು ಈಗಲ್ ಟನ್ ರೆಸಾರ್ಟ್ ನಲ್ಲಿ ಕುಡಿದು ಶಾಸಕರು ಪರಸ್ಪರ ಹಲ್ಲೆ ಮಾಡಿಕೊಂಡಿದ್ದ ಹಿನ್ನಲೆ ಬಿಡದಿ ಪೊಲೀಸ್ ಠಾಣೆಯಲ್ಲಿ ಶಾಸಕ ಆನಂದ್ ಸಿಂಗ್ ದೂರು ನೀಡಿದ್ರು. ದೂರು ದಾಖಲಾದ ನಂತರ ತಲೆಮರೆಸಿಕೊಂಡಿದ್ದ ಗಣೇಶ್ ನನ್ನು ಪೋಲೀಸರು ಫೆಬ್ರವರಿ 21 ರಂದು ಬಂಧಿಸಿ ರಾಮನಗರ ಕೋರ್ಟ್ ಗೆ ಹಾಜರಿ ಪಡಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಿದ್ದರು.
ಈಗಾಗಲೇ 33 ದಿನ ಜೈಲಿನಲ್ಲಿ ಕಳೆದಿರುವ ಗಣೇಶ್ ಹೈಕೋರ್ಟ್ ಜಾಮೀನು ಅರ್ಜಿ ಸಲ್ಲಿಸಲು ತೀರ್ಮಾನಿಸಿದ್ದು, ಇನ್ನು ಎರಡು ಮೂರು ದಿನಗಳಲ್ಲಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.