ಆನೇಕಲ್(ಬೆಂಗಳೂರು): ಕಳೆದ ಮೂರು ದಿನಗಳಿಂದ ಕಾಣೆಯಾಗಿದ್ದ ವೃದ್ಧೆ ಇಂದು ಕೊಲೆಯಾಗಿರುವ ಸ್ಥಿತಿಯಲ್ಲಿ ನೆರಳೂರಿನ ಬಾಡಿಗೆ ಮನೆಯಲ್ಲಿ ಪತ್ತೆಯಾಗಿದ್ದಾರೆ. ಆನೇಕಲ್ ತಾಲೂಕಿನ ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯ ನೆರಳೂರು ಮೊದಲ ಅಡ್ಡರಸ್ತೆಯ ಅಂಬರೀಶ್ ಎಂಬುವವರ ಬಾಡಿಗೆ ಮನೆಯ 3ನೇ ಮಹಡಿಯ ಕೊಠಡಿಯಲ್ಲಿ ಶವ ದೊರೆತಿದೆ.
ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಹುಲಿಕುಂಟೆಯ ಮೂಸಗೊಲ್ಲಹಟ್ಟಿ ಹಳ್ಳಿಯ ನಿವಾಸಿ ಪಾರ್ವತಮ್ಮ (80) ಕೊಲೆಯಾಗಿದ್ದಾರೆ. ಮಹಿಳೆ ಕಾಣೆಯಾಗಿದ್ದಾಳೆಂದು ಆಕೆಯ ಮಗ ರಮೇಶ್ ಅತ್ತಿಬೆಲೆ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಅತ್ತಿಬೆಲೆ ಪೊಲೀಸ್ ಇನ್ಸ್ಪೆಕ್ಟರ್ ಕೆ.ವಿಶ್ವನಾಥ್ ತೀವ್ರ ಪರಿಶೀಲನೆ ನಡೆಸಿದಾಗ ಬಟ್ಟೆ ಸುತ್ತಿ ಶವವನ್ನು ವಾರ್ಡ್ರೋಬ್ನಲ್ಲಿ ಬಚ್ಚಿಟ್ಟಿರುವುದು ಗೊತ್ತಾಗಿದೆ.
ಅದೇ ಮನೆಯ 3ನೇ ಅಂತಸ್ತಿನ ಕೊಠಡಿಯಲ್ಲಿ ವಾಸವಿದ್ದ ಪಾಯಲ್ ಖಾನ್ ಎಂಬ ಮಹಿಳೆ ಪಾರ್ವತಮ್ಮ ಅವರ ಹುಡುಕಾಟ ನಡೆಸುತ್ತಿದ್ದರು. ದೂರು ದಾಖಲಾಗುತ್ತಿದ್ದಂತೆ ಪಾಯಲ್ ನಾಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಶವವನ್ನು ತೆರೆದು ನೋಡಿದಾಗ ಮಹಿಳೆಯ ಕತ್ತಿನಲ್ಲಿದ್ದ ಮಾಂಗಲ್ಯ ಸರ, ಕಿವಿ ಓಲೆ, ಮಾಟಿ, ಮೂಗು ನತ್ತು ಹಾಗೂ ಒಂದು ಉಂಗುರ ನಾಪತ್ತೆಯಾಗಿದೆ. ಮಹಿಳೆಯ ಒಡವೆಗಳನ್ನು ದೋಚಿ ಪಾರುಖ್ ಖಾನ್ ನಾಪತ್ತೆಯಾಗಿರುವ ಅನುಮಾನವಿದೆ. ಪೊಲೀಸರು ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಟೆಕ್ಕಿ ಅಪಹರಣ: ಚಿನ್ನಾಭರಣ ಸೇರಿ ₹10 ಲಕ್ಷ ದೋಚಿದ ದುಷ್ಕರ್ಮಿಗಳ ಬಂಧನ