ಬೆಂಗಳೂರು: ಬಿಜೆಪಿ ಶಾಸಕ ಅರವಿಂದ್ ಲಿಂಬಾವಳಿ ಮಹಿಳೆಯ ವಿರುದ್ಧ ಬಳಸಿರುವ ಪದ ಹಾಗೂ ಅವರ ದುರ್ನಡತೆ ಬಿಜೆಪಿಯ ಹೀನಾಯ ಸಂಸ್ಕೃತಿಯನ್ನು ಎತ್ತಿ ತೋರುತ್ತದೆ. ಮಹಿಳೆಯ ಮೇಲೆ ದೌರ್ಜನ್ಯ ಹಾಗೂ ಅತ್ಯಂತ ಕೆಟ್ಟ ಪದ ಬಳಸಿರುವ ಅರವಿಂದ್ ಲಿಂಬಾವಳಿ ಕೂಡಲೇ ಮಹಿಳೆಯ ಬಳಿ ಕ್ಷಮೆ ಕೇಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಭಾನುವಾರ ಕಾಂಗ್ರೆಸ್ ಕಚೇರಿಯಲ್ಲಿ ನಗರ ಪ್ರಚಾರ ಸಮಿತಿಯಿಂದ ಪ್ರತಿಭಟನೆ ನಡೆಸಿ ಹಾಗೂ ಪ್ರತಿಕೃತಿ ದಹಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮನೋಹರ್, ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಮಹಿಳೆಯರಿಗೆ ರಕ್ಷಣೆ ಗೌರವ ನೀಡಬೇಕೆಂದು ಪ್ರತಿಬಾರಿಯೂ ತಮ್ಮ ಸುಳ್ಳು ಭಾಷಣವನ್ನು ನುಡಿಯುತ್ತಲೇ ಇರುತ್ತಾರೆ. ಆದರೆ, ಬಿಜೆಪಿ ಶಾಸಕರು ನಾಯಕರು ಕರ್ನಾಟಕದಲ್ಲಿ ಮಹಿಳೆಯರಿಗೆ ಯಾವ ರೀತಿಯಲ್ಲಿ ಗೌರವ ನೀಡುತ್ತಿದ್ದಾರೆ ಎಂಬುದರ ಬಗ್ಗೆ ಮೊದಲು ಮಾಹಿತಿಯನ್ನು ಪಡೆದು ಪ್ರಧಾನಿ ಮೋದಿ ಸೂಕ್ತ ಕ್ರಮಕೈಗೊಳ್ಳಿ ಎಂದು ಒತ್ತಾಯಿಸಿದರು.
ಪ್ರಧಾನಿ ಸೂಕ್ತ ಕ್ರಮ ಜರುಗಿಸದೇ ಹೋದರೆ ನೀವು ಮಹಿಳೆಯರ ವಿರೋಧಿ ಎಂಬುದು ಸಾಬೀತಾಗುತ್ತದೆ. ಜನಪ್ರತಿನಿಧಿಯಾದ ಅರವಿಂದ್ ಲಿಂಬಾವಳಿ ಬಳಿ ಜನರು ಸಂಕಷ್ಟವನ್ನು ತಿಳಿಸಲು ಬಂದರೆ ಅವರ ವಿರುದ್ಧವೇ ಅವಾಚ್ಯ ಪದ ಬಳಸಿ ಅವರಿಗೆ ಬೆದರಿಕೆಯನ್ನು ಸಹ ಹಾಕಿದ್ದಾರೆ. ಇಂತಹ ಜನಪ್ರತಿನಿಧಿ ರಾಜ್ಯಕ್ಕೆ ಬೇಕೆ ಎಂದು ಪ್ರಶ್ನಿಸಿದರು.
ಇಂತಹ ಅನಾಗರಿಕತೆಯಿಂದ ವರ್ತಿಸಿರುವ ಬಿಜೆಪಿ ಶಾಸಕ ಅರವಿಂದ್ ಲಿಂಬಾವಳಿ ಅವರನ್ನು ಕೂಡಲೇ ಬಿಜೆಪಿ ವಜಾಗೊಳಿಸಬೇಕು. ಸ್ಥಳದಲ್ಲಿದ್ದ ಪೊಲೀಸರು ಮಹಿಳೆಗೆ ರಕ್ಷಣೆ ನೀಡದೆ ಶಾಸಕರ ಸೂಚನೆ ಪಾಲಿಸಿರುವುದು ರಾಜ್ಯ ಪೊಲೀಸ್ ಇಲಾಖೆಗೆ ಅಗೌರವ ಹಾಗೂ ಕರ್ತವ್ಯಲೋಪ ಎಂಬುದು ಬಹಿರಂಗವಾಗಿದೆ ಎಂದು ದೂರಿದರು.
ಮನವಿ ಸಲ್ಲಿಸಲು ಬಂದ ಮಹಿಳೆಯ ಮೇಲೆ ದೌರ್ಜನ್ಯ ನಡೆಸಿ ಹಾಗೂ ಮಾಧ್ಯಮಗಳಿಗೆ ಹೇಳಿಕೆ ನೀಡುವ ಸಂದರ್ಭದಲ್ಲಿ ಬಳಸಿರುವ ಪದ ಅತ್ಯಂತ ಹೀನಾಯ ಪದವಾಗಿದೆ. ಇಂತಹ ಪದ ಬಳಸಿರುವ ಶಾಸಕ ಅರವಿಂದ ಲಿಂಬಾವಳಿ ವಿರುದ್ಧ ಕೂಡಲೇ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಂಧಿಸಬೇಕೆಂದು ಮನೋಹರ್ ಆಗ್ರಹಿಸಿರು.
ಪ್ರತಿಭಟನೆಯಲ್ಲಿ ಪ್ರಚಾರ ಸಮಿತಿಯ ಮುಖಂಡರಾದ ಜಿ. ಜನಾರ್ಧನ್, ಎ.ಆನಂದ್, ಪರಿಸರ ರಾಮಕೃಷ್ಣ, ಮಂಜುನಾಥ್, ವೆಂಕಟೇಶ್, ಅನಿಲ್, ಪುಟ್ಟರಾಜು, ಚೇತನ್, ಸತೀಶ್ ಗೌಡ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದರು.
ಇದನ್ನೂ ಓದಿ: ನಾನೇನು ರೇಪ್ ಮಾಡಿದ್ನಾ ಎಂದ ಲಿಂಬಾವಳಿ... ಸ್ತ್ರೀಯರಿಗೆ ಮಾಡಿದ ಅವಮಾನ: ಕಾಂಗ್ರೆಸ್ ಆಕ್ರೋಶ