ಬೆಂಗಳೂರು: ಕೆಲ ತಿಂಗಳ ಹಿಂದೆಯಷ್ಟೇ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ, ಶಸ್ತ್ರ ಚಿಕಿತ್ಸೆ ವೇಳೆ ಔಷಧದ ಲೋಪದೋಷದಿಂದ 24 ಜನರು ಕಣ್ಣು ಕಳೆದುಕೊಂಡ ಪ್ರಕರಣದ ನೆನಪು ಇನ್ನು ಮಾಸಿಲ್ಲ. ಸದ್ಯ ಈ ಪ್ರಕರಣದ ನಂತರ ಮಿಂಟೋ ಆಡಳಿತ ಮಂಡಳಿ ಎಚ್ಚೆತ್ತುಕೊಂಡಿದೆ.
ಔಷಧ ಲೋಪದೋಷದಿಂದ ಸುಮಾರು 24 ಜನರು ದೃಷ್ಠಿ ಹೀನರಾದ ಬಳಿಕ ವೈದ್ಯರ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆಯಿಂದ ಗಲಾಟೆ ಕೂಡಾ ಆಗಿತ್ತು. ಕಾರ್ಯಕರ್ತರು ಹಲ್ಲೇ ಮಾಡಿದರು ಅಂತ ವೈದ್ಯರು ವಾರಗಳ ಕಾಲ ಪ್ರತಿಭಟನೆಯನ್ನು ಮಾಡಿದ್ದರು. ಸದ್ಯ ಇಷ್ಟೆಲ್ಲ ಬೆಳವಣಿಗೆ ಆದ ನಂತರ, ಕೆಟ್ಟ ಮೇಲೆ ಬುದ್ಧಿ ಬಂತು ಅನ್ನೋ ಹಾಗೆ ಮಿಂಟೋ ವೈದ್ಯರು ಔಷಧ ತಪಾಸಣೆ ಮಾಡೋಕ್ಕೆ ಶುರು ಮಾಡಿದ್ದಾರೆ.
ಡ್ರಗ್ ಕಂಟ್ರೋಲ್ ಬೋರ್ಡ್ನಲ್ಲಿ ಪರೀಕ್ಷೆ ಮಾಡಲಿ ಅಥವಾ ಬಿಡಲಿ, ಬರುವ ಔಷಧಿಗಳನ್ನು ರೋಗಿಗಳಿಗೆ ನೀಡೋ ಮೊದಲು ವೈದ್ಯರು ಔಷಧಗಳ ಗುಣಮಟ್ಟವನ್ನು ಪರೀಕ್ಷಿಸ್ತಿದ್ದಾರೆ. ಈಗಾಗ್ಲೇ ಆಸ್ಪತ್ರೆಗೆ ಬರ್ತಿರೋ ಔಷಧಗಳನ್ನ ರ್ಯಾಂಡಮ್ ಟೆಸ್ಟ್ ಮಾಡಲಾಗ್ತಿದೆ. ಇದರಲ್ಲಿ ಏನಾದರು ಲೋಪದೋಷ ಕಂಡು ಬಂದಲ್ಲಿ, ಅಂತಹ ಔಷಧಗಳನ್ನು ನಿಷೇಧ ಮಾಡುವಂತೆ ವರದಿ ನೀಡಲಾಗುತ್ತಿದೆ ಎಂದು ಮಿಂಟೋ ಕಣ್ಣಿನ ಆಸ್ಪತ್ರೆ ನಿರ್ದೇಶಕಿಯಾದ ಸುಜಾತ ರಾಥೋಡ್ ತಿಳಿಸಿದರು.
ಈ ಹಿಂದೆ ಆದ ಎಡವಟ್ಟು ಇನ್ನೊಮ್ಮೆ ಆಗದಂತೆ ಮತ್ತು ರೋಗಿಗಳಿಗೆ ಯಾವುದೇ ರೀತಿಯ ಅನಾಹುತವಾಗದಂತೆ ಎಚ್ಚರಿಕೆ ವಹಿಸಲು ಮುಂದಾಗಿದ್ದಾರೆ.