ಬೆಂಗಳೂರು: ಮಿಂಟೋ, ವಿಕ್ಟೋರಿಯಾ, ಬೋರಿಂಗ್ ಆಸ್ಪತ್ರೆ ಮಹಿಳಾ ವೈದ್ಯರ ಮೇಲೆ ಹಲ್ಲೆ ಮಾಡಿದ ಕರವೇ ಕಾರ್ಯಕರ್ತರನ್ನು ಬಂಧಿಸುವಂತೆ ಒತ್ತಾಯಿಸಿ ಇಂದು ಒಪಿಡಿ(ಹೊರರೋಗಿಗಳ ವಿಭಾಗ) ಬಂದ್ ಮಾಡಿ ಆಸ್ಪತ್ರೆ ಸಿಬ್ಬಂದಿಗಳು ಪ್ರತಿಭಟನೆ ನಡೆಸಲಿದ್ದಾರೆ.
ಕಳೆದ ತಿಂಗಳು ಮಿಂಟೋ ಆಸ್ಪತ್ರೆಯಲ್ಲಿ ಸರಿಯಾಗಿ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಲ್ಲ ಎಂದು ಶಸ್ತ್ರಚಿಕಿತ್ಸೆಗೆ ಒಳಗಾದವರು ವಿವಿಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಬಗ್ಗೆ ಕರ್ನಾಟಕ ಮೆಡಿಕಲ್ ಕೌನ್ಸಿಲ್ ನಲ್ಲಿ ತನಿಖೆ ಪ್ರಗತಿಯಲ್ಲಿದೆ. ಆದರೂ ವಿನಾಕಾರಣ ಸೀರಿಯಲ್ ನಟಿ ಮತ್ತು ಕರವೇ ಮಹಿಳಾ ವಿಭಾಗದ ಅಧ್ಯಕ್ಷೆಯಾಗಿರುವ ಅಶ್ವಿನಿ ಗೌಡ ನೇತೃತ್ವದಲ್ಲಿ ಕರ್ತವ್ಯ ನಿರತ ವೈದ್ಯರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಈ ಹಿಂದೆಯೂ ರಾತ್ರಿ ಕರ್ತವ್ಯ ನಿರತ ವೈದ್ಯರ ಮೇಲೆ ಹಲ್ಲೆ ನಡೆದಿತ್ತು. ಸದ್ಯ ಕನ್ನಡ ರಾಜೋತ್ಸವ ನೆಪದಲ್ಲಿ ಕನ್ನಡ ಮಾತನಾಡುತ್ತಿಲ್ಲ ಎಂದು ಐವರು ಮಹಿಳಾ ಕರ್ತವ್ಯ ನಿರತ ವೈದ್ಯರ ಮೇಲೆ ಹಲ್ಲೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಹೀಗಾಗಿ ಈ ಹಲ್ಲೆ ಖಂಡಿಸಿ ವಿಕ್ಟೋರಿಯಾ ಆಸ್ಪತ್ರೆ ಮುಂಭಾಗ ವೈದ್ಯರು, ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಂದ ಪತ್ರಿಭಟನೆ ನಡೆದಿದೆ. ಹಲ್ಲೆ ನಡೆಸಿದ ಕರವೇ ಕಾರ್ಯಕರ್ತರನ್ನು ಬಂಧಿಸುವವರೆಗೆ ಕರ್ತವ್ಯಕ್ಕೆ ಹಾಜರಾಗದೇ ಇರಲು ಆಸ್ಪತ್ರೆ ಸಿಬ್ಬಂದಿಗಳು ತೀರ್ಮಾನಿಸಿದ್ದಾರೆ. ವಿಕ್ಟೋರಿಯಾ, ಬೋರಿಂಗ್ , ಮೀಂಟೋ ಆಸ್ಪತ್ರೆಯಲ್ಲಿ ಒಪಿಡಿ ವ್ಯವಸ್ಥೆ ಬಂದ್ ಮಾಡಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.