ಬೆಂಗಳೂರು: ಶಿವಮೊಗ್ಗದಲ್ಲಿ ಯಾವುದೇ ರೀತಿಯ ಗೊಂದಲ ಆಗಿಲ್ಲ. ಇನ್ನು ಆ ರೀತಿ ಆಗಬಾರದು ಎಂದು ಸೂಚನೆ ನೀಡಲಾಗಿದೆ ಎಂದು ಶಿವಮೊಗ್ಗ ಉಸ್ತುವಾರಿ ಸಚಿವ ನಾರಾಯಣಗೌಡ ತಿಳಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ವಿದ್ಯಾರ್ಥಿನಿಯರು ಪರೀಕ್ಷೆ ಬರೆಯದೇ ಹಿಂತಿರುಗಿದ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಶಿವಮೊಗ್ಗದಲ್ಲಿ ಗೊಂದಲ ನಡೆಯುತ್ತಿದೆ ಎಂದು ಸುದ್ದಿಯಾಗಿದೆ. ನಾನು ಡಿಸಿ ಮತ್ತು ಎಸ್ಪಿ ಜೊತೆ ಮಾತನಾಡಿದ್ದೇನೆ. ಆ ತರದ ಗೊಂದಲ ಆಗಿಲ್ಲ. ಏಳು ಜನ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲ್ಲ ಎಂದಿದ್ದರು. ಆ ವೇಳೆ ಮಾಧ್ಯಮದವರು ಅದನ್ನು ಚಿತ್ರೀಕರಿಸಿದ್ದಾರೆ ಎಂದು ವಿವರಿಸಿದರು.
ಹಿಜಾಬ್ ತೆಗೆದು ಪರೀಕ್ಷೆ ಬರೆಯಿರಿ ಎಂದು ಅಧಿಕಾರಿಗಳು ಹೇಳಿದ್ದರು. ಅವರನ್ನು ಗೌರವದಿಂದಲೇ ನೋಡಲಾಗಿದೆ. ಬಳಿಕ ಅವರನ್ನು ತಂದೆ ತಾಯಿ ಬಂದು ಮನೆಗೆ ಕರೆದುಕೊಂಡು ಹೋದರು. ವಿದ್ಯಾರ್ಥಿಗಳು ಹಠ ಹಿಡಿಯಬಾರದು. ಪರೀಕ್ಷೆ ಎದುರಿಸಿ ತಮ್ಮ ಜೀವನ ಮುನ್ನಡೆಸಿ. ಕೋರ್ಟ್ ತೀರ್ಪು ಪಾಲನೆ ಮಾಡಬೇಕು ಎಂದು ಮನವಿ ಮಾಡಿದರು.
ಜಮೀರ್ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಜಮೀರ್ ಕುಟುಂಬದಲ್ಲೇ ಹಿಜಾಬ್ ಧರಿಸಲ್ಲ. ಅವರು ಆ ರೀತಿ ಮಾತನಾಡುವುದು ಸರಿಯಲ್ಲ ಎಂದು ಕಿಡಿ ಕಾರಿದರು.
ಇದನ್ನೂ ಓದಿ : ಶಿವಮೊಗ್ಗ: ಹಿಜಾಬ್ ಧರಿಸಲು ಅವಕಾಶ ನೀಡದ್ದಕ್ಕೆ ಪರೀಕ್ಷೆ ಬಹಿಷ್ಕರಿಸಿದ 13 ವಿದ್ಯಾರ್ಥಿನಿಯರು