ಬೆಂಗಳೂರು: ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ನಡೆದ ದುರಂತ ಪ್ರಕರಣಕ್ಕೆ ಆಕ್ಸಿಜನ್ ಪೂರೈಕೆಯಲ್ಲಿ ಲೋಪ ಕಾರಣವಾಗಿದೆ ಎನ್ನಲಾಗಿದ್ದು, ಇದರಲ್ಲಿ ತಪ್ಪಿತಸ್ಥರಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಕಳೆದ 24 ಗಂಟೆಯಲ್ಲಿ 20ಕ್ಕೂ ಹೆಚ್ಚಿನ ಸಾವು ಸಂಭವಿಸಿದೆ. ಆದರೆ ಎಲ್ಲಾ ಸಾವುಗಳು ಆಮ್ಲಜನಕದ ಕೊರತೆಯ ಕಾರಣದಿಂದ ಆಗಿಲ್ಲ. ರೋಗಿಗಳು ಸಮಸ್ಯೆಯ ಆರಂಭಿಕ ಹಂತದಲ್ಲೇ ಆಸ್ಪತ್ರೆಗೆ ಬರುತ್ತಿಲ್ಲ. ಎಲ್ಲ ಸಮಸ್ಯೆ ಅಂತಿಮ ಹಂತದಲ್ಲಿ ರೋಗಿಗಳನ್ನು ಕರೆತರುತ್ತಾರೆ. ಕಳೆದ ರಾತ್ರಿ12 ರಿಂದ 2.30 ರವರೆಗೆ ಆಮ್ಲಜನಕದ ಸಮಸ್ಯೆ ಇತ್ತು. ಆ ಸಮಯದಲ್ಲಿ ಎರಡು-ಮೂರು ಸಾವು ಆಗಿರಬಹುದು. ನಾನು ಈಗಾಗಲೇ ಈ ಸಂಬಂಧ ಸಿಎಂ ಪ್ರಧಾನ ಕಾರ್ಯದರ್ಶಿ, ಸರ್ಕಾರದ ಕಾರ್ಯದರ್ಶಿ ಎಲ್ಲರ ಜೊತೆ ಮಾತುಕತೆ ನಡೆಸಿದ್ದೇನೆ, ನಮ್ಮ ಜಿಲ್ಲೆಗೆ ಏನು ಕೋಟಾದಂತೆ ಸಿಲಿಂಡರ್ ಪೂರೈಕೆ ಆಗಬೇಕೋ ಅದನ್ನು ಸರಿಯಾಗಿ ಮಾಡಲು ಮನವಿ ಮಾಡಿದ್ದೇನೆ. ಈಗ ಉನ್ನತ ಮಟ್ಟದ ಸಭೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದರು.
ಇದನ್ನೂ ಓದಿ: ಆಕ್ಸಿಜನ್ ಕೊರತೆಯಿಂದ ಭಾರಿ ದುರಂತ: ಚಾಮರಾಜನಗರ ಡಿಸಿಗೆ ಸಿಎಂ ತರಾಟೆ
ಮೈಸೂರಿನಿಂದ ಮಂಡ್ಯ, ಚಾಮರಾಜನಗರಕ್ಕೆ ಆಮ್ಲಜನಕದ ಸಿಲಿಂಡರ್ ಪೂರೈಕೆ ಮುಂದುವರೆಸುವಂತೆ ಮನವಿ ಮಾಡಿದ್ದೇನೆ. ಈಗ ಸಮಸ್ಯೆಯಾದ ಬಗ್ಗೆ ಪರಿಶೀಲನೆ ನಡೆಸಲು ಮನವಿ ಮಾಡಿದ್ದೇನೆ. ಮುಂದೆ ಇದು ಮತ್ತೆ ಮರುಕಳಿಸಬಾರದು ಹಾಗು ಈಗ ಆಗಿದ್ದಕ್ಕೆ ಯಾರ ತಪ್ಪು ಎಂದು ಪರಿಶೀಲಿಸಿ ಅವರಿಗೆ ಶಿಕ್ಷೆಯಾಗಬೇಗಬೇಕು ಎಂದು ಹೇಳಿದರು.
ಇದನ್ನೂ ಓದಿ: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ದುರಂತ: 23 ರೋಗಿಗಳು ಸಾವು
ಚಾಮರಾಜನಗರದಲ್ಲೇ ಬಳಕೆಯಾಗದ ಆಕ್ಸಿಜನ್ ಪ್ಲಾಂಟ್ ಇದೆ. ಅದನ್ನು ಕೊಡುವಂತೆ ಮನವಿ ಮಾಡಿದ್ದೇವೆ. ಅದು ಸಿಕ್ಕಲ್ಲಿ ಆಕ್ಸಿಜನ್ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ತಿಳಿಸಿದರು.