ಬೆಂಗಳೂರು: ತುಮಕೂರು ಪ್ರವಾಸ ಮುಗಿಸಿ ಮನೆಗೆ ಬಂದ ಯಡಿಯೂರಪ್ಪನವರ ಜೊತೆ ಸಚಿವರಾದ ಎಂ ಟಿ ಬಿ ನಾಗರಾಜ್,ಗೋಪಾಲಯ್ಯ ಸಿಎಂ ಚರ್ಚೆ ನಡೆಸಿ ಖಾತೆ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
ಈ ಇಬ್ಬರನ್ನೂ ಸಮಧಾನಪಡಿಸಲು ಬೊಮ್ಮಾಯಿ,ಅಶೋಕ್ ಸಿಎಂ ನಿವಾಸಕ್ಕೆ ಬಂದು ಸುದೀರ್ಘ ಚರ್ಚೆ ನಡೆಸಿದ್ದಾರೆ. ಇದಾದ ನಂತರ ಸಿಎಂ ನಿವಾಸಕ್ಕೆ ಸಚಿವರಾದ ಶಿವರಾಂ ಹೆಬ್ಬಾರ್, ಬಿ.ಸಿ ಪಾಟೀಲ್ ಆಗಮಿಸಿದರು.
ಸಚಿವ ಗೋಪಾಲಯ್ಯ ಮಾಧ್ಯಮಗಳ ಜೊತೆ ಮಾತನಾಡಿ, ನಿನ್ನೆ ರಾತ್ರಿ ಸಿಎಂ ಅವರನ್ನು ಭೇಟಿ ಮಾಡಿದ್ದೆ. ಇವತ್ತೂ ಮಾಡಿದ್ದೇನೆ. ಕಂದಾಯ ಸಚಿವರು ಗೃಹ ಸಚಿವರು ಎಂ.ಟಿ.ಬಿ ಇವರೆಲ್ಲರ ಜೊತೆ ಸಿಎಂ ಭೇಟಿ ಮಾಡಿದ್ದೇನೆ. 11 ತಿಂಗಳ ಹಿಂದೆ ನನಗೆ ಆಹಾರ ಖಾತೆ ಕೊಟ್ಟಿದ್ದರು ಆತ್ಮಸಾಕ್ಷಿಗೆ ಅನುಗುಣವಾಗಿ ಕೋವಿಡ್ ಸಂದರ್ಭದಲ್ಲೂ ಕೆಲಸ ಮಾಡಿದ್ದೇನೆ. ಖಾತೆ ಬದಲಾವಣೆ ಬಗ್ಗೆ ಸಿಎಂ ಜೊತೆ ಮಾತಾಡಿದ್ದೇನೆ. ಬಿಜೆಪಿ ಒಂದು ರಾಷ್ಟ್ರೀಯ ಪಕ್ಷ. ನಮ್ಮಲ್ಲಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳಿದ್ರೂ, ನಾಲ್ಕು ಗೋಡೆಗಳ ಮಧ್ಯೆ ಬಗೆಹರಿಸಿಕೊಳ್ತೀವಿ. ಸಿಎಂ ಮೇಲೆ ವಿಶ್ವಾಸವಿದೆ. ಸಿಎಂ ಯಡಿಯೂರಪ್ಪ ಕೊಟ್ಟ ಖಾತೆಯನ್ನು ನಿರ್ವಹಣೆ ಮಾಡುತ್ತೇನೆ ಎಂದರು.
ಎಂ ಟಿ ಬಿ ನಾಗರಾಜ್ ಮತನಾಡಿ, ಗೃಹ ಸಚಿವ ಬೊಮ್ಮಾಯಿ ಕಂದಾಯ ಸಚಿವ ಆರ್ ಅಶೋಕ್ ಜೊತೆ ಮಾತನಾಡಿದ್ದೇನೆ. ಸಿಎಂ ಜೊತೆ ಚರ್ಚೆ ಮಾಡಿದ್ದೀನಿ. ಅಬಕಾರಿ ಖಾತೆ ಕೊಟ್ಟಿದ್ದಕ್ಕೆ ಬೇಸರ ಆಗಿದೆ. ಪಕ್ಷದ ವಿಚಾರವನ್ನು ಆಂತರಿಕವಾಗಿ ಬಗೆಹರಿಸೋಣ ಎಂದು ಸಿಎಂ ಹೇಳಿದ್ದಾರೆ. ಸಿಎಂ ಏನ್ ಹೇಳ್ತಾರೆ ಅದರ ಹಾಗೆ ನಡೆಯುತ್ತೇನೆ ಎಂದು ತಿಳಿಸಿದರು.
ಇನ್ನು ಆರ್.ಅಶೋಕ್ ಮಾಧ್ಯಮಗಳ ಜೊತೆ ಮಾತನಾಡಿ, ಸಂಪುಟ ವಿಸ್ತರಣೆ ಆದ ಸಂದರ್ಭದಲ್ಲಿ ಮಾಧ್ಯಮದಲ್ಲಿ ಗೊಂದಲವಿದೆ ಎನ್ನುವ ಮಾತುಗಳು ಬಂದಿದ್ದವು. ರಾಜಿನಾಮೆ ಅಂತ ಎಲ್ಲಾ ಮಾಧ್ಯಮಗಳಲ್ಲಿ ಬರ್ತಿದೆ. ನಾವೆಲ್ಲರೂ ಕೂಡ ಒಂದು ಕುಟುಂಬ, ಸರ್ಕಾರ ಮಾಡುವಲ್ಲಿ ಎಲ್ಲರೂ ಸಹಾಯ ಮಾಡಿದ್ದಾರೆ. ಆ ದೃಷ್ಟಿಯಿಂದ ಕ್ಯಾಬಿನೆಟ್ ರಚನೆ ಆಗಿದೆ. ಸಿಎಂ ಅವರದೇ ಆದ ದೃಷ್ಟಿಯಿಂದ ಮಾಡಿದ್ದಾರೆ, ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ನಾವೆಲ್ಲರೂ ಒಂದೇ ಕುಟುಂಬ, ನೋವು ನಲಿವು ಎಲ್ಲವನ್ನು ಸಿಎಂ ಬಳಿ ಇಡುತ್ತೇವೆ ಎಂದರು.
ಸಿ ಎಂ ಯಡಿಯೂರಪ್ಪ ನಮಗೆ ಪ್ರಶ್ನಾತೀತ ನಾಯಕರು. ಅವರ ನೇತೃತ್ವದಲ್ಲಿ ನಾವೆಲ್ಲಾ ಹೋಗ್ತೀವಿ. ಸಚಿವ ಸೋಮಶೇಖರ್, ಬೊಮ್ಮಾಯಿ ನಾವೆಲ್ಲಾ ಚರ್ಚೆ ಮಾಡಿದ್ದೇವೆ ಎಂದು ಗೊಂದಲಗಳಿಗೆ ತೆರೆ ಎಳೆಯಲು ಪ್ರಯತ್ನಿಸಿದರು. ಮಾಧ್ಯಮದ ಹೇಳಿಕೆ ಬಳಿಕ ಸಿಎಂ ನಿವಾಸದಿಂದ ಸಚಿವ ಗೋಪಾಲಯ್ಯ ಮತ್ತು ಎಂ ಟಿ ಬಿ ನಾಗರಾಜ್ ತೆರಳಿದರು.
ಸಚಿವ ನಾರಾಯಣ ಗೌಡ ಮಾಧ್ಯಮಗಳ ಜೊತೆ ಮತನಾಡಿ, ಜೆಡಿಎಸ್ ತೊರೆದು ಬಿಜೆಪಿಗೆ ಬಂದಿದ್ದೇನೆ, ಬಿ.ಜೆ.ಪಿ ರಾಷ್ಟ್ರೀಯ ಪಕ್ಷ, ಇಲ್ಲಿ ಬಂದಿದ್ದಕ್ಕೆ ಖುಷಿಯಾಗಿದ್ದೇವೆ. ಯಾವುದೇ ಅಸಮಾಧಾನ ಇಲ್ಲ. ಹಿರಿಯ ಸಚಿವರು ಇದ್ದಾಗ ಸಣ್ಣವರು ತಾಳ್ಮೆಯಿಂದ ಇದ್ದೇವೆ. ಕೊಟ್ಟ ಖಾತೆಯನ್ನು ಸರಿಯಾಗಿ ನಿಭಾಯಿಸುತ್ತೇನೆ ಎಂದರು.
ನಾರಾಯಣ ಗೌಡರ ಹೇಳಿಕೆ ಬಳಿಕ ಮಾಧ್ಯಮಗಳಿಗೆ ಆರ್. ಅಶೋಕ್ ಪ್ರತಿಕ್ರಿಯುಸುತ್ತಾ, ಕ್ಯಾಬಿನೆಟ್ ವಿಸ್ತರಣೆ ಸಂದರ್ಭದಲ್ಲಿ ಕೆಲ ಖಾತೆಗಳು ಬದಲಾವಣೆ ಆಗಿದೆ. ಯಾವುದೇ ರೀತಿಯ ಗೊಂದಲಗಳು ಇಲ್ಲ. ನಾರಾಯಣ ಗೌಡರು ನನಗೆ ಕಾಲ್ ಮಾಡಿದ್ದರು. ನಾನು ಬರ್ತೇನೆ ಅಂತ ಹೇಳಿದ್ದರು. ಈಗ ಸಿಎಂ ಭೇಟಿಗೆ ಬಂದಿದ್ದಾರೆ. ನಾರಾಯಣ ಗೌಡರಿಗೆ ಯಾವುದೇ ರೀತಿ ಕೋಪ ಇಲ್ಲ. ನಾವೆಲ್ಲ ಒಂದೆ ಕುಟುಂಬದವರು. ಪಕ್ಷದಲ್ಲಿ ಯಾವುದೇ ರೀತಿಯ ಗೊಂದಲವಿಲ್ಲ ಎಂದು ಹೇಳಿದರು.
ಬಸವರಾಜ್ ಬೊಮ್ಮಾಯಿ ಮಾತನಾಡಿ ,ನಮ್ಮ ಸ್ನೇಹಿತರು ಕಾಂಗ್ರೆಸ್, ಜೆಡಿಎಸ್ನಿಂದ ಬಂದು ಒಂದೂವರೆ ವರ್ಷ ಆಗಿದೆ. ಅವರ ಜತೆ ನಾವು ಕೆಲಸ ಮಾಡಿದ್ದೇವೆ.ಖಾತೆ ಹಂಚಿಕೆಯಾದಾಗ ಗೊಂದಲ ಆಗೋದು ಸಾಮಾನ್ಯ. ಈ ಗೊಂದಲವನ್ನು ಬಗೆಹರಿಸಲು ಸಿಎಂ ಸಮರ್ಥರಾಗಿದ್ದಾರೆ. ಅವರು ಕೂಡ ಸಿಎಂ ಮಾತನ್ನು ಪ್ರಬುದ್ಧವಾಗಿ ಕೇಳಿದ್ದಾರೆ. ನಾನು ಬೆಳ್ಳಗ್ಗೆ ಹೇಳಿದ್ದೆ. ಅಸಮಾಧಾನಗೊಂಡವರ ಜತೆ ಸಿಎಂ ಚರ್ಚೆ ಮಾಡಿ ಎಲ್ಲಾ ಶಮನ ಮಾಡ್ತಾರೆ ಅಂತ. ಹಾಗೆಯೇ ಆಗಿದೆ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ,ನಾವೆಲ್ಲಾ ಒಗ್ಗಟ್ಟಾಗಿದ್ದೇವೆ ಎಂದು ತಿಳಿಸಿದರು.