ಬೆಂಗಳೂರು : ಸಮಯಾವಕಾಶ ಸಿಕ್ಕಾಗಲೆಲ್ಲಾ ಸರ್ಕಾರ ಹಾಗೂ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇಂದು ಸಹ ವಿಧಾನಸಭೆಯಲ್ಲಿ ಸಚಿವರುಗಳ ಗೈರು ಹಾಜರಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಓದಿ: ರಾಜ್ಯದಲ್ಲಿ ಕೊರೊನಾ ಹೆಚ್ಚಳ: ಸರ್ಕಾರದ ಜೊತೆ ಕೈಜೋಡಿಸುವಂತೆ ಜನತೆಗೆ ಸಿಎಂ ಕರೆ
ಇಂದು ಸದನದ ಕಲಾಪ ಆರಂಭವಾಗುತ್ತಿದ್ದಂತೆಯೇ ಆಡಳಿತ ಪಕ್ಷದ ಕಡೆ ಸಚಿವರುಗಳ ಹಾಜರಾತಿ ಕಡಿಮೆ ಇತ್ತು. ಇದನ್ನು ಸಭಾಧ್ಯಕ್ಷರ ಗಮನಕ್ಕೆ ತಂದ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಸಭಾಧ್ಯಕ್ಷರೇ ಹೀಗಾದರೆ ಹೇಗೆ, ಸದನದಲ್ಲಿ ಮುಖ್ಯಮಂತ್ರಿಗಳೂ ಇಲ್ಲ. ಸಚಿವರೂ ಇಲ್ಲ ಇದೇನಿದು ಎಂದು ಏರುಧ್ವನಿಯಲ್ಲಿ ಹೇಳಿದರು.
ವಿರೋಧ ಪಕ್ಷಧ ಕಡೆಯಿಂದಲೂ ಹಲವು ಸದಸ್ಯರು ಸಚಿವರುಗಳ ಗೈರು ಹಾಜರಿ ಬಗ್ಗೆ ಆಕ್ಷೇಪಿಸಿದರು. ಕೆಲ ಸಚಿವರುಗಳು ಅನುಮತಿ ಪಡೆದು ಹೋಗಿದ್ದಾರೆ, ಉಳಿದವರು ಬರುತ್ತಾರೆ ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸದನಕ್ಕೆ ತಿಳಿಸಿದರು.
ಇಷ್ಟಾದರೂ ಬಿಡದ ಯತ್ನಾಳ್, ಎಲ್ಲರೂ ಸದನಕ್ಕೆ ಬರಬೇಕು. ಹೀಗಾದರೆ, ಹೇಗೆ ಸರಿಯಾದ ಉತ್ತರವೂ ಬರಲ್ಲ. ನೀವು ನಮಗೆ ಮಾತನಾಡಲು ಅವಕಾಶ ಕೊಡಲ್ಲ ಎಂದು ಮತ್ತೊಮ್ಮೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.