ಬೆಂಗಳೂರು : ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪಾಸ್ ಮಾಡ್ತೀವಿ, ದುಡ್ಡು ಕೊಟ್ಟರೇ ಪಾಸ್ ಮಾಡ್ತೀವಿ ಅನ್ನೋ ದಂಧೆ ನಡೀತಿರುವುದು ಗಮನಕ್ಕೆ ಬಂದಿದೆ. ಹೀಗಾಗಿ, ಎಲ್ಲ ವಿದ್ಯಾರ್ಥಿಗಳು ಹಾಗೂ ಪೋಷಕರು ಯಾರೂ ವಂಚನೆಗೆ ಒಳಗಾಗಬಾರದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಮನವಿ ಮಾಡಿದರು.
ಈ ವರ್ಷ ನಡೆಸುತ್ತಿರುವ ಎಸ್ಎಸ್ಎಲ್ಸಿ ಪರೀಕ್ಷೆ ಯಾರನ್ನೋ ಪಾಸ್/ಫೇಲ್ ಮಾಡಲು ಅಲ್ಲ. ಎಲ್ಲರೂ ನಿಮ್ಮ ಅರ್ಹತೆ ಮೇಲೆ ಪಾಸ್ ಆಗ್ತಿದ್ದೀರಿ. ಯಾರೋ ಹೇಳಿದ್ದರೂ ಅಂತಾ ಮೋಸ ಹೋಗಬೇಡಿ ಎಂದರು.
ರಾಜ್ಯಾದ್ಯಂತ ಸೋಮವಾರ ಎಸ್ಎಸ್ಎಲ್ಸಿ ಪರೀಕ್ಷೆ ನಡೆದಿದೆ. ಆದರೆ, ಪರೀಕ್ಷೆ ಬರೆದು ಬಂದ ನಂತರ ತನಗೆ ಕಡಿಮೆ ಅಂಕಗಳು ಬರಬಹುದೆಂದು ಹೊಸನಗರ ಜಿಲ್ಲೆಯ ರಿಪ್ಪನ್‍ಪೇಟೆಯ ವಿದ್ಯಾರ್ಥಿನಿ ಕೆಂಚನಾಲ ಚೇತನ್ ಆತ್ಮಹತ್ಯೆಗೆ ಯತ್ನ ಮಾಡಿದ್ದಾರೆ. ಯಾರೂ ಅಧೀರರಾಗಬಾರದು. ಜೀವನದಲ್ಲಿ ಇದೇ ಮೊದಲ ಪರೀಕ್ಷೆಯಲ್ಲ, ಅನೇಕ ಕಷ್ಟನಷ್ಟಗಳು, ಪರೀಕ್ಷೆಗಳು ಎದುರಾಗಲಿವೆ. ಎಲ್ಲವನ್ನೂ ಧೈರ್ಯದಿಂದ ಎದುರಿಸಬೇಕು ಎಂದು ಹೇಳಿದರು.
ಯಾವೊಬ್ಬ ಮಕ್ಕಳು ಪರೀಕ್ಷಾ ಫಲಿತಾಂಶದಿಂದ ಎದೆಗುಂದಬಾರದು. ಪೋಷಕರೂ ಸಹ ಮಕ್ಕಳಿಗೆ ಧೈರ್ಯ ಹೇಳಲು ಮುಂದಾಗಬೇಕು. ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಗುರುವಾರದ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗಿ ಚೆನ್ನಾಗಿ ಬರೆಯಬೇಕೆಂದು ಕಿವಿಮಾತು ಹೇಳಿದರು.
ಇದನ್ನೂ ಓದಿ: ದ್ವಿತೀಯ ಪಿಯುಸಿ ಫಲಿತಾಂಶದ ಬಗ್ಗೆ ಅಸಮಾಧಾನ ಇದ್ದರೆ, ಆಗಸ್ಟ್ನಲ್ಲಿ ಪರೀಕ್ಷೆ ಬರೆಯಬಹುದು..