ಬೆಂಗಳೂರು: ರಾಜ್ಯದ ಗಡಿಜಿಲ್ಲೆಯಾದ ಕಾಸರಗೋಡಿನಲ್ಲಿರುವ ಕನ್ನಡ ಶಾಲೆಗಳಲ್ಲಿ ಕನ್ನಡ ಗೊತ್ತಿರದ ಶಿಕ್ಷಕರ ನೇಮಕ ಮಾಡಿರುವುದರಿಂದ ಕನ್ನಡ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ. ಕೂಡಲೇ ಮುಖ್ಯಮಂತ್ರಿಗಳ ಮೂಲಕ ಕೇರಳ ಸರ್ಕಾರದ ಜೊತೆ ಮಾತುಕತೆ ನಡೆಸಿ, ಸಮಸ್ಯೆ ಇತ್ಯರ್ಥಪಡಿಸಲಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ್ ಭರವಸೆ ನೀಡಿದ್ದಾರೆ.
ವಿಧಾನಪರಿಷತ್ನ ಶೂನ್ಯವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಸಲೀಂ ಅಹಮದ್ ಮಾತನಾಡಿ, ಕಾಸರಗೋಡಿನಲ್ಲಿ ಕನ್ನಡ ಶಿಕ್ಷಕರನ್ನು ನೇಮಿಸದೆ ಮಲಯಾಳಂ ಶಿಕ್ಷಕರ ನೇಮಕ ಮಾಡಲಾಗುತ್ತಿದೆ. ಗಡಿಭಾಗದ ಮಕ್ಕಳ ಹಿತದೃಷ್ಟಿಯಿಂದ ಕ್ರಮಕೈಗೊಳ್ಳುವುದು ಅಗತ್ಯವಾಗಿದೆ. ಕೂಡಲೇ ಸರ್ಕಾರ ಮಧ್ಯಪ್ರವೇಶಿಸಿ ಸಮಸ್ಯೆ ಪರಿಹರಿಸಬೇಕು ಎಂದರು.
ಇದನ್ನೂ ಓದಿ: ಸದನ ಸ್ವಾರಸ್ಯ: 'ನಮ್ಮ ಕ್ಷೇತ್ರದ ದೇಗುಲಗಳಿಗೆ ಅನುದಾನ ನೀಡಿದ್ರೆ ನಿಮಗೆ ದೇವರು ಆಶೀರ್ವಾದ ಮಾಡುತ್ತಾನೆ'
ಇದಕ್ಕೆ ಉತ್ತರಿಸಿದ ಸಚಿವ ಸುನೀಲ್ ಕುಮಾರ್, ಮಂಜೇಶ್ವರ, ಕಾಸರಗೋಡಿನಲ್ಲಿ ತೊಂದರೆಯಾಗದಂತೆ ಕ್ರಮ ವಹಿಸುವ ಜವಾಬ್ದಾರಿ ನಮ್ಮದು. ಈ ಸಂಬಂಧ ಕೇರಳ ಸರ್ಕಾರದ ಜೊತೆ ಮಾತುಕತೆ ನಡೆಸಲಾಗುತ್ತದೆ. ಸಿಎಂ ಜೊತೆ ಮಾತುಕತೆ ನಡೆಸಿ ನಂತರ ಏನೆಲ್ಲಾ ಕ್ರಮ ಕೈಗೊಳ್ಳಬೇಕೋ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.