ಬೆಂಗಳೂರು: ನಮ್ಮನ್ನು ಏಕೆ ಟಾರ್ಗೆಟ್ ಮಾಡುತ್ತಿದ್ದಾರೆ ಎನ್ನುವುದು ಗೊತ್ತಿಲ್ಲ. ನಾವು ಯಾವುದೇ ತಪ್ಪು ಮಾಡಿಲ್ಲ, ನಾವು ತಪ್ಪು ಮಾಡೋದು ಇಲ್ಲ. ಇಂದು ಕೂಡ 5-6 ಸಚಿವರು ಕೋರ್ಟ್ಗೆ ಹೋಗುತ್ತಾರೆ ಎಂದು ಸಚಿವ ಡಾ. ಸುಧಾಕರ್ ಹೇಳಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಆರು ಜನ ಅಷ್ಟೇ ಅಲ್ಲ. ಇನ್ನು ಹೆಚ್ಚು ಮಂತ್ರಿಗಳು ಕೂಡ ಕೋರ್ಟ್ಗೆ ಹೋಗುವವರಿದ್ದಾರೆ. ಇದು ರಾಜಕೀಯ ಪಿತೂರಿ, ಷಡ್ಯಂತ್ರ ನಡೆಯುತ್ತಿದೆ. ಮಾಧ್ಯಮಗಳನ್ನು ಉಪಯೋಗಿಸಿಕೊಂಡು ತೇಜೋವಧೆ ಮಾಡಲಾಗುತ್ತಿದೆ. ಅನೇಕ ವರ್ಷಗಳಿಂದ ಗಳಿಸಿದ ಹೆಸರನ್ನು ಹಾಳು ಮಾಡುವಂತದ್ದು ಹೊಸ ಸಂಸ್ಕೃತಿ ಆಗಿದೆ. ಇದಕ್ಕೆ ಇತಿಶ್ರೀ ಹಾಡಬೇಕು. ಹಾಗೆಯೇ ಬಲವಾದ ಕಾನೂನು ತರಬೇಕೆಂಬ ಚಿಂತನೆಯನ್ನು ಸರ್ಕಾರ ನಡೆಸುತ್ತಿದೆ. ಕಾನೂನು ಸಚಿವರ ಜೊತೆ ಹಾಗೂ ಸಿಎಂ ಜೊತೆ ಈ ಬಗ್ಗೆ ಮಾತನಾಡಿದ್ದೇವೆ ಎಂದರು.
ಎಲ್ಲ ಕ್ಷೇತ್ರದಲ್ಲಿಯೂ ಇದು ನಡೆಯುತ್ತಿದೆ, ಯಾವ ರೀತಿ ಷಡ್ಯಂತ್ರ ನಡೆಯುತ್ತಿದೆ ಎಂಬುದು ಗೊತ್ತಾಗುತ್ತಿದೆ. ನೈಜತೆ ಇದ್ದರೆ ಹೊರಬರಲಿ, ನಾವ್ಯಾರು ಕಾನೂನಿಗಿಂತ ದೊಡ್ಡವರಲ್ಲ. ಆದರೆ, ಸುಳ್ಳು ಹಾಗೂ ತಪ್ಪು ಪ್ರಚಾರ ಸರಿಯಲ್ಲ. ಈ ರೀತಿ ಇದ್ದಾಗ ಕಾನೂನು ಮೆಟ್ಟಿಲು ಯಾಕೆ ಹತ್ತಲ್ಲ? ಜನರ ಮುಂದೆ ಖಳನಾಯಕರನ್ನಾಗಿ ಮಾಡಲು, ತಮ್ಮ ಬೇಳೆ ಬೇಯಿಸಿಕೊಳ್ಳಲು ಹೀಗೆ ಮಾಧ್ಯಮಗಳ ಮುಂದೆ ಬರುತ್ತಿದ್ದಾರೆ ಎಂದು ಜಾರಕಿಹೊಳಿ ವಿರುದ್ಧದ ಸಿಡಿ ನಕಲಿ ಎಂದು ಸಮರ್ಥಿಸಿಕೊಂಡರು.
ಓದಿ: ’ತೇಜೋವಧೆ ಆಗೋ ಸಾಧ್ಯತೆ ಇರೋದರಿಂದ ಕೋರ್ಟ್ ಮೊರೆ ಹೋಗಿದ್ದಾರೆ’: ಸಚಿವ ಬೊಮ್ಮಾಯಿ
ರಷ್ಯಾ, ದುಬೈನಿಂದ ಅಪ್ಲೋಡ್ ಮಾಡಿಸಿ ಷಡ್ಯಂತ್ರ ಮಾಡಲಾಗುತ್ತಿದೆ. ಈಗ ಕೇವಲ ನಾವು 6 ಜನ ಸಚಿವರು, ಶಾಸಕರು ಅಲ್ಲ, ಮುಂದೆ ಇನ್ನೂ ಹೆಚ್ಚು ಸದಸ್ಯರು ಕೋರ್ಟ್ಗೆ ಹೋಗುತ್ತಾರೆ. ಸತ್ಯವಂತರಿಗೆ ಭಯ ಇಲ್ಲ, ಆದರೆ ಹಿಟ್ ಅಂಡ್ ರನ್ ಮಾಡುವ ಜನರು ಭಯ ಬೀಳಬೇಕಾಗಿದೆ. ಮೊದಲ ದಿನ ಸಂತ್ರಸ್ತೆ ಎಂದು ಹೇಳಿದ್ದಾರೆ, ಆದರೆ ಸಂತ್ರಸ್ತೆ ಇಲ್ಲಿಯವರೆಗೆ ಏಕೆ ಮುಂದೆ ಬಂದಿಲ್ಲ? ಆಕೆಯ ಕುಟುಂಬ ಕೂಡ ಮುಂದೆ ಬಂದಿಲ್ಲ. ಅವಳು ಯಾರು ಏನೂ ಎಂಬುದು ಗೊತ್ತಿಲ್ಲ. ಇಂದು ಕೂಡ 5-6 ಜನ ಸಚಿವರು ಕೋರ್ಟ್ಗೆ ಹೋಗುತ್ತಾರೆ ಎಂದು ತಿಳಿಸಿದರು.