ಬೆಂಗಳೂರು : ರಾಜ್ಯದ ಸಾರಿಗೆ ನೌಕರರು ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ ಈ ಹಿಂದೆ ಪ್ರತಿಭಟನೆ ನಡೆಸಿದ್ದರು. ಈ ವೇಳೆ 1,400ಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಕಳೆದುಕೊಂಡಿದ್ದರು. ನಿಗಮಗಳು ಅವರನ್ನ ವಜಾ ಮಾಡಿದ್ದವು.
ಇದೀಗ ಮುಷ್ಕರದ ವೇಳೆ ವಜಾಗೊಂಡ ಬಿಎಂಟಿಸಿ ಸಿಬ್ಬಂದಿಗೆ ಮರು ನೇಮಕಾತಿ ಆದೇಶ ಪತ್ರ ವಿತರಣೆ ಮಾಡಲಾಯಿತು. ಸಾರಿಗೆ ಸಚಿವ ಶ್ರೀರಾಮುಲು ಇಂದು ತಮ್ಮ ಸರ್ಕಾರಿ ನಿವಾಸ 7 ಮಿನಿಸ್ಟರ್ ಕ್ವಾಟ್ರಸ್ನಲ್ಲಿ ವಜಾಗೊಂಡಿದ್ದ 100 ಸಿಬ್ಬಂದಿಗೆ ಮರು ನೇಮಕಾತಿ ಆದೇಶ ಪ್ರತಿ ವಿತರಣೆ ಮಾಡಿದರು.
ಈ ವೇಳೆ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ, ಶಾಸಕ ಸೋಮಶೇಖರ್ ರೆಡ್ಡಿ, ಬಿಎಂಟಿಸಿ ಎಂ.ಡಿ ಅನೂಪ್ ಕುಮಾರ್ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತಿ ಇದ್ದರು. ಈ ಸಂದರ್ಭದಲ್ಲಿ ಮಾತಾನಾಡಿದ ಸಚಿವ ಶ್ರೀರಾಮುಲು, ಏಪ್ರಿಲ್ ನಲ್ಲಿ ಮುಷ್ಕರ ಮಾಡಿ ವಜಾ, ಅಮಾನತ್ತು ಅಂತ ಸುಮಾರು 1,400 ಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಕಳೆದುಕೊಂಡಿದ್ದರು.
ಮುಷ್ಕರದಲ್ಲಿ ನಾಲ್ಕು ನಿಗಮದ ಸಾರಿಗೆ ನೌಕರರು ವಜಾ ಅಮಾನತು ಆಗಿದ್ದರು. ಮುಷ್ಕರ ಯಾವ ಸಂದರ್ಭದಲ್ಲಿ ಮಾಡಬೇಕಿತ್ತು ಎಂಬುದನ್ನ ನೌಕರರು ತಿಳಿದುಕೊಳ್ಳಬೇಕಿತ್ತು. ಮುಷ್ಕರದಿಂದ ಸಾರ್ವಜನಿಕ ಆಸ್ತಿ ಹಾನಿಯಾಗುತ್ತದೆ. ಸಾರಿಗೆ ನೌಕರರು ಸಚಿವರು, ಸಿಎಂ ಜೊತೆ ಮಾತಾನಾಡಬೇಕಿತ್ತು ಎಂದು ಶ್ರೀ ರಾಮುಲು ಅಭಿಪ್ರಾಯಪಟ್ಟರು.
ಇಂದು 100 ಸಿಬ್ಬಂದಿಗೆ, ನಾಳೆ 200 ಸಿಬ್ಬಂದಿಗೆ, ಇದೇ ತಿಂಗಳಲ್ಲಿ 700 ಸಿಬ್ಬಂದಿಗೆ ಮರು ನೇಮಕಾತಿ ಆದೇಶ ನೀಡುವುದಾಗಿ ಶ್ರೀರಾಮುಲು ಹೇಳಿದರು. ನೇಮಕಾತಿ ಪತ್ರ ಪಡೆದವರಿಗೆ ಇನ್ಮುಂದೆ ಯಾವುದೇ ಮುಷ್ಕರದಲ್ಲಿ ಪಾಲ್ಗೊಳ್ಳದಂತೆ ಷರತ್ತುಗಳನ್ನ ಹಾಕಿಯೇ ಅವರನ್ನ ಪುನಃ ತೆಗೆದುಕೊಂಡಿದ್ದೀವಿ.
ನಾಳೆ ದಿನ ಮುಷ್ಕರಕ್ಕೆ ಹೋದ್ರೆ ಮತ್ತೆ ನಾವು ನೌಕರರನ್ನ ಕೆಲಸಕ್ಕೆ ಸೇರಿಸಿಕೊಳ್ಳಲು ಆಗೋದಿಲ್ಲ. ಸಮಸ್ಯೆ ಇದ್ದರೆ ಹಿರಿಯ ಅಧಿಕಾರಿಗಳೊಂದಿಗೆ ಮಾತಾಡಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸಲಹೆಗಳನ್ನ ನೀಡಲಾಗಿದೆ ಎಂದರು.
ಬಿಎಂಟಿಸಿ ಟಿಕೆಟ್ ದರ ಏರಿಕೆ ಸದ್ಯಕ್ಕಿಲ್ಲ : ನಷ್ಟದಲ್ಲೇ ತೇವಳುತ್ತ ಸಾಗ್ತಿರೋ ನಗರ ಸಾರಿಗೆ ಬಿಎಂಟಿಸಿಯಲ್ಲಿ ಟಿಕೆಟ್ ದರ ಏರಿಕೆ ಆಗಲಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ನೌಕರರ ಮುಷ್ಕರ, ಕೊರೊನಾದ ಸಂಕಷ್ಟ, ಡಿಸೇಲ್ ಬೆಲೆ ಏರಿಕೆಯ ಕಾರಣದಿಂದಾಗಿ ನಿಗಮವೂ ಟಿಕೆಟ್ ದರ ಏರಿಕೆಯ ಪ್ರಸ್ತಾವನೆ ಸರ್ಕಾರದ ಮುಂದಿಟ್ಟಿತ್ತು.
ಆದರೆ, ಸಿಎಂ ಬಸವರಾಜ ಬೊಮ್ಮಾಯಿ ಟಿಕೆಟ್ ದರ ಏರಿಕೆ ಕುರಿತು ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ಯಥಾಸ್ಥಿತಿ ಕಾಯ್ದುಕೊಂಡು ಹೋಗುವಂತೆ ಸೂಚನೆ ನೀಡಿದ್ದಾರೆ. ಸದ್ಯ ತಿಂಗಳಿಗೆ ಬಿಎಂಟಿಸಿಗೆ 90-95 ಕೋಟಿ ಬರ್ತಾಯಿದ್ದು, ಖರ್ಚು ಮಾತ್ರ 155 ಕೋಟಿ ಆಗುತ್ತಿದೆ. ನೌಕರರಿಗೆ ಸಂಬಳ ನೀಡಲು ಹಣ ಇಲ್ಲದೆ ನಿಗಮ ಒದ್ದಾಡುತ್ತಿದೆ.
ಈ ಸಂಬಂಧ 2014 ರಿಂದ ಇಲ್ಲಿಯವರೆಗೆ ಬಂದಿರುವ ಎಲ್ಲ ಎಂ.ಡಿ ಗಳು ಟಿಕೆಟ್ ದರ ಏರಿಕೆ ಪ್ರಸ್ತಾಪ ಮುಂದಿಟ್ಟಿವೆ. ಆದರೆ, ಸರ್ಕಾರ ಮಾತ್ರ ಮುಂದಕ್ಕೆ ಹಾಕುತ್ತಲೇ ಇದೆ. ಈ ಬಗ್ಗೆ ಸಚಿವರು ಸದ್ಯಕ್ಕೆ ದರ ಏರಿಕೆ ಇಲ್ಲವೆಂದು ಸ್ಪಷ್ಟ ಪಡಿಸಿದ್ದಾರೆ. ಬಿಎಂಟಿಸಿಯು ಸೇವಾ ಮನೋಭಾವದಿಂದ ಸೇವೆ ಸಲ್ಲಿಸುತ್ತಿದೆ ಎಂದರು.
ಇನ್ನು ಬಿಎಂಟಿಸಿ ಬಸ್ಸಿನಲ್ಲಿ ಕಾಣಿಸಿಕೊಂಡ ಬೆಂಕಿ ವಿಚಾರವಾಗಿ ಮಾತನಾಡಿದ ಅವರು, ಅಧಿಕಾರಿಗಳಿಗೆ ಈ ಸಂಬಂಧ ವರದಿ ನೀಡಲು ಸೂಚಿಸಲಾಗಿದ್ದು, ನಾಳೆ ವರದಿ ಕೈ ಸೇರಲಿದ್ದು, ಆ ಬಳಿಕ ಉತ್ತರ ನೀಡುತ್ತೇನೆ ಅಂತ ತಿಳಿಸಿದರು.
ವಾಲ್ಮೀಕಿ ಸಮಾಜಕ್ಕೆ ಮೀಸಲಾತಿ: ವಾಲ್ಮೀಕಿ ಸಮಾಜಕ್ಕೆ ಶೇ. 7.5ರಷ್ಟು ಮೀಸಲಾತಿಗೆ ಆಗ್ರಹಿಸಿ ಧರಣಿ ಸತ್ಯಾಗ್ರಹಕ್ಕೆ ಮುಂದಾಗುತ್ತಿದ್ದು ಈ ಕುರಿತು ಪ್ರತಿಕ್ರಿಯಿಸಿದ ಸಚಿವರು, ನಮ್ಮ ಸರ್ಕಾರ ಬದ್ಧವಾಗಿದ್ದು ಅದನ್ನ ಜಾರಿಗೆ ತರುವ ವಿಚಾರದಲ್ಲಿ ಸಿಎಂ ಜೊತೆಗೆ ಮಾತುಕತೆ ನಡೆಸಲಾಗಿದೆ. ಜಸ್ಟಿಸ್ ನಾಗಮೋಹನ್ ದಾಸ್ ವರದಿಯನ್ನ ಕೊಟ್ಟಿದ್ದಾರೆ.
ಉನ್ನತ ಮಟ್ಟದ ಸಮಿತಿಯ ವರದಿ ಬಂದ ನಂತರ ಇದನ್ನ ಜಾರಿಗೆ ತರಲಾಗುವುದು. ಸ್ವಾಮೀಜಿಗಳಿಗೆ ಧರಣಿಯನ್ನ ವಾಪಸ್ ಪಡೆಯುಂತೆ ಮನವಿ ಮಾಡಲಾಗುವುದು ಎಂದರು.
ಇದನ್ನು ಓದಿ:Breaking.. ಹಿಜಬ್ - ಕೇಸರಿ ಶಾಲು ಧರಿಸುವಂತಿಲ್ಲ.. ಶೀಘ್ರವೇ ಶಾಲೆ ಆರಂಭಿಸಲು ಸರ್ಕಾರಕ್ಕೆ ಸಿಜೆ ಸೂಚನೆ