ಬೆಂಗಳೂರು: ಅಸಂಘಟಿತ ಕಾರ್ಮಿಕರಿಗೆ ಜೀವನ ಹಾಗೂ ಉದ್ಯೋಗ ಭದ್ರತೆ ಒದಗಿಸುವ ಮಹತ್ವದ ಕಾರ್ಮಿಕ ಸಂಹಿತೆಯನ್ನು ರಾಜ್ಯ ಸರ್ಕಾರ ಜಾರಿಗೆ ತರಲಿದೆ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ತಿಳಿದರು.
ವಿಧಾನಪರಿಷತ್ನಲ್ಲಿ ಕಾಂಗ್ರೆಸ್ ಸದಸ್ಯ ಅರವಿಂದ ಅರಳಿ ನಿಯಮ 72ರ ಅಡಿ ಗಮನ ಸೆಳೆದ ವಿಚಾರಕ್ಕೆ ಉತ್ತರ ನೀಡಿದ ಸಚಿವರು, ಕಳೆದ 3 ವರ್ಷದಲ್ಲಿ ಒಟ್ಟು 33,916 ಕಾರ್ಮಿಕರಿಗೆ ಸಂಬಂಧಿಸಿದಂತೆ 87,68,72,289 ರೂ. ಮೊತ್ತದ 3244 ಕ್ಲೇಮ್ ಅರ್ಜಿಗಳನ್ನು ಸಕ್ಷಮ ಪ್ರಾಧಿಕಾರಗಳ ಮುಂದೆ ದಾಖಲಾಗಿಸಲಾಗಿದೆ. ಇದು ವಿಚಾರಣೆ ನಡೆಸಿ 15,063 ಕಾರ್ಮಿಕರಿಗೆ ಸಂಬಂಧಿಸಿದ 27,80,78,017 ರೂ. ಮೊತ್ತಕ್ಕೆ ಆದೇಶ ಹೊರಡಿಸಿ 3222 ಕ್ಲೇಮ್ ವಿಲೇವಾರಿ ಮಾಡಲಾಗಿರುತ್ತದೆ. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ 2 ಕೋಟಿಯಷ್ಟು ಕಾರ್ಮಿಕರಿದ್ದಾರೆ. ರಾಜ್ಯದಲ್ಲಿ 17 ಸಾವಿರ ಕಾರ್ಖಾನೆಯಲ್ಲಿ 17 ಲಕ್ಷ ಕಾರ್ಮಿಕರು ಕೆಲಸ ಮಾಡ್ತಿದ್ದಾರೆ. 6 ಲಕ್ಷ ಮಹಿಳಾ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ ಎಂಬ ವಿವರ ನೀಡಿದರು.
ಬಳಿಕ ಅರವಿಂದ ಕುಮಾರ ಅರಳಿ ಮಾತನಾಡಿ, ಕಾರ್ಮಿಕರಿಗೆ ಕನಿಷ್ಠ ವೇತನ ಮೂಲ ಸೌಕರ್ಯ ಒದಗಿಸುವ ಕುರಿತು ಪ್ರಸ್ತಾಪ ಮಾಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ಇ-ಶ್ರಮ ಪೋರ್ಟಲ್ ತಂದ ಮೇಲೆ ಕಾರ್ಮಿಕ ಇಲಾಖೆಯಲ್ಲಿ ನೇಮಕ ಮಾಡಿಕೊಳ್ಳದ ಮನೆಗೆಲಸದವರು ಹಾಗೂ 7 ಲಕ್ಷ ಮಹಿಳೆಯರು ಹೆಸರು ನೋಂದಾಯಿಸಿಕೊಂಡರು. ಈ ಪೋರ್ಟಲ್ ಇಂತಹವರಿಗೆ ಬಹಳ ಉಪಯುಕ್ತ ಆಗಿದೆ ವಿಶೇಷ ಬಿಲ್ ತರುವವರ ಬಗ್ಗೆ ಸಿಎಂ ಅನುಮತಿ ನೀಡಿದ್ದಾರೆ.
ಡ್ರೈವರ್, ಕ್ಲೀನರ್,ಮೆಕಾನಿಕ್ಗಳು, ಪಂಚರ್ ಹಾಕುವವರು, ಕ್ಯಾಬ್ ಚಾಲಕರು, ಇವರಿಗೆ ಅನುಕೂಲ ಆಗಲಿದೆ. ನಾನು ಡ್ರೈವರ್ ಆಗಿ, ಕ್ಲೀನರ್ ಆಗಿ ಕೆಲಸ ಮಾಡಿದ ಅನುಭವದ ಆಧಾರದ ಮೇಲೆ ಬಿಲ್ ತರುತ್ತಿದ್ದೇವೆ. ಹಲವು ವರ್ಗಗಳಿಂದ ಅನುಭವ ತೆಗೆದುಕೊಂಡು ಬಿಲ್ ತರುತ್ತಿದ್ದೇವೆ. ಇವರಲ್ಲಿ ಯಾರಾದರು ಮೃತಪಟ್ಟರೆ 5 ಲಕ್ಷ ಪರಿಹಾರ ನೀಡುವುದು ಸೇರಿದಂತೆ ಹಲವು ಅನುಕೂಲ ಮಾಡಿ ಕೊಡಲಿದ್ದೇವೆ ಎಂದರು.
ನಾಲ್ಕು ಕಾರ್ಮಿಕ ಸಂಹಿತೆ ಜಾರಿಗೆ ಕೇಂದ್ರ ನಿರ್ಧಾರ: ಕಟ್ಟಡಗಳ ಕಾರ್ಮಿಕರ ಹೆಸರು ನೋಂದಣೆಯಲ್ಲಿ ಕಾರ್ಮಿಕರಲ್ಲದವರು ಹೆಸರು ನೋಂದಯಿಸಿಕೊಳ್ಳುವುದು ಸರ್ಕಾರದ ಗಮನಕ್ಕೆ ಬಂದಿದೆ. ಅಂತವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುತ್ತಿದ್ದೇವೆ. ಲೆಬರ್ ಇನ್ಸ್ಪೆಕ್ಟರ್ ನೇಮಕಾತಿಗೆ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. 4 ಕಾರ್ಮಿಕ ಸಂಹಿತೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ನಮ್ಮ ರಾಜ್ಯದಲ್ಲೂ 4 ಕಾರ್ಮಿಕ ಸಂಹಿತೆ ತರುತ್ತೇವೆ. ಸೋಷಿಯಲ್ ಸೆಕ್ಯೂರಿಟಿ ಕಾಯ್ದೆಯಡಿ ಕೋಡ್ ಬಂದಾಗ ಎಲ್ಲರಿಗೂ ಅನುಕೂಲ ಆಗುತ್ತದೆ. ಶೀಘ್ರವೇ ಎಲ್ಲರೊಂದಿಗೆ ಚರ್ಚೆ ಮಾಡಿ ಬಿಲ್ ತರುತ್ತೇವೆ ಎಂದರು.
ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಸಂಹಿತೆ ಅನುಕೂಲ: ಪ್ರಸ್ತುತ ಕಾರ್ಮಿಕರಿಗೆ ಸಂಬಂಧಿಸಿದ 29 ಕಾಯ್ದೆಗಳು ಜಾರಿಯಲ್ಲಿವೆ. ಇವುಗಳ ಬದಲಿಗೆ ವೇತನ ಸಂಹಿತೆ, ಕೈಗಾರಿಕಾ ಸಂಹಿತೆ, ಸಾಮಾಜಿಕ ಭದ್ರತಾ ಸಂಹಿತೆ ಮತ್ತು ವೃತ್ತಿ ಸುರಕ್ಷತೆ, ಆರೋಗ್ಯ ಹಾಗೂ ಸೇವಾ ಷರತ್ತುಗಳ ಸಂಹಿತೆ ಎಂಬ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಕೇಂದ್ರ ಸರ್ಕಾರ ತರಲು ಉದ್ದೇಶಿಸಿದೆ. 17 ರಾಜ್ಯಗಳು ಈಗಾಗಲೇ ಈ ಕಾರ್ಮಿಕ ಸಂಹಿತೆಗಳನ್ನು ಒಪ್ಪಿವೆ. ಈ ಸಂಹಿತೆಗಳಿಂದ ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಅನುಕೂಲ ಆಗಲಿದೆ ಎಂದು ವಿವರಿಸಿದರು.
ಇದನ್ನೂ ಓದಿ: ನೀಟ್ ಪಾಸ್ ಮಾಡಿದವರಿಗೆ ಸೀಟು ಕನ್ಫರ್ಮ್: ಸಚಿವ ಸುಧಾಕರ್